ನವದೆಹಲಿ: ದೇಶಾದ್ಯಂತ ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಜನತೆಗೆ ಹವಾಮಾನ ಇಲಾಖೆಯು ಸಿಹಿಸುದ್ದಿ ನೀಡಿದೆ. ಈ ವರ್ಷ ಮುಂಗಾರು ಮಾರುತಗಳು ನಿಗದಿತ ಸಮಯಕ್ಕಿಂತ ಮೊದಲೇ ಭಾರತವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಇಲಾಖೆ ಭವಿಷ್ಯ ನುಡಿದಿದೆ.
ಮೇ 14ರಿಂದ ಮೇ 16ರ ಅವಧಿಯಲ್ಲಿ ಮುಂಗಾರು ಮಾರುತಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಲುಪುವ ನಿರೀಕ್ಷೆಯಿದೆ.ಮೇ ತಿಂಗಳಲ್ಲಿ ದೇಶದ ಒಟ್ಟಾರೆ ಮಳೆಯ ಪ್ರಮಾಣವು ವಾಡಿಕೆಗಿಂತ ಹೆಚ್ಚಿರಲಿದೆ. ದೀರ್ಘಾವಧಿಯ ಸರಾಸರಿಗೆ ಹೋಲಿಸಿದರೆ ಈ ಬಾರಿ ಶೇ. 110 ರಷ್ಟು ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.
ತಾಪಮಾನ ಇಳಿಕೆ: ಅಧಿಕ ಮಳೆಯ ಮುನ್ಸೂಚನೆಯಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಹಗಲಿನ ತಾಪಮಾನವು ಸರಾಸರಿಗಿಂತ ಇಳಿಕೆಯಾಗುವ ಮೂಲಕ ಬಿಸಿಲಿನ ತಾಪ ತಗ್ಗಲಿದೆ.
ಪೂರ್ವ ಮತ್ತು ಈಶಾನ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಬಿತ್ತನೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದ್ದು, ಮೇ 5ರವರೆಗೆ ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಿಂದ ಪ್ರವಾಹದ ಭೀತಿಯೂ ಇದೆ.
ವಾಯುವ್ಯ ಭಾರತ:
ಮೇ 3ರಿಂದ ಮೇ 6ರವರೆಗೆ ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಶಾಖದ ಅಲೆ (Heat Wave):
ಮಳೆಯ ಮುನ್ಸೂಚನೆಯ ನಡುವೆಯೂ ದಕ್ಷಿಣ ಹಿಮಾಚಲ ಪ್ರದೇಶ, ಉತ್ತರಾಖಂಡ, ಪೂರ್ವ ಕರಾವಳಿ, ಮಹಾರಾಷ್ಟ್ರ ಮತ್ತು ಗುಜರಾತ್ನ ಕೆಲವು ಭಾಗಗಳಲ್ಲಿ ಮುಂದಿನ 3-8 ದಿನಗಳ ಕಾಲ ಶಾಖದ ಅಲೆ ತೀವ್ರಗೊಳ್ಳುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಅಂಡಮಾನ್ ತಲುಪಿದ ಕೆಲವೇ ದಿನಗಳಲ್ಲಿ ಮುಂಗಾರು ಕೇರಳವನ್ನು ಪ್ರವೇಶಿಸುತ್ತದೆ. ಈ ಕುರಿತ ಅಧಿಕೃತ ಮತ್ತು ನಿಖರವಾದ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ಮೇ ತಿಂಗಳ ದ್ವಿತೀಯಾರ್ಧದಲ್ಲಿ ಪ್ರಕಟಿಸಲಿದೆ.








