ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನೌಕರರಿಗೆ ರಾಜ್ಯ ಸರ್ಕಾರ ಮತ್ತು ನಿಗಮವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಸುದೀರ್ಘ ದಿನಗಳ ಬೇಡಿಕೆಯಾಗಿದ್ದ ವೇತನ ಪರಿಷ್ಕರಣೆಯ ಹಿಂಬಾಕಿ (Arrears) ಮೊತ್ತವನ್ನು ಬಿಡುಗಡೆಗೊಳಿಸಲಾಗಿದ್ದು, ಸಾರಿಗೆ ನೌಕರರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿದೆ.
ರಾಜ್ಯ ಸರ್ಕಾರದ ಆದೇಶದನ್ವಯ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ಮತ್ತು ನೌಕರರಿಗೆ 2020ರ ವೇತನ ಪರಿಷ್ಕರಣೆಯ ಅನ್ವಯ, ದಿನಾಂಕ 01.01.2021 ರಿಂದ 28.02.2023 ರವರೆಗಿನ ಒಟ್ಟು 26 ತಿಂಗಳ ಹಿಂಬಾಕಿ ಮೊತ್ತ ರೂ. 1,271.92 ಕೋಟಿಗಳನ್ನು ಪಾವತಿಸಲು ಅನುಮೋದನೆ ನೀಡಲಾಗಿತ್ತು.
ಬಿಎಂಟಿಸಿಗೆ ರೂ. 137.24 ಕೋಟಿ ಮಂಜೂರು
ಈ ಬೃಹತ್ ಮೊತ್ತದ ಪೈಕಿ, ಸರ್ಕಾರವು ಪ್ರಸ್ತುತ ಮೊದಲ ಹಂತವಾಗಿ ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿ/ನೌಕರರ ಹಿಂಬಾಕಿ ಮೊತ್ತಕ್ಕಾಗಿ ರೂ. 450.00 ಕೋಟಿಗಳನ್ನು ಬಿಡುಗಡೆಗೊಳಿಸಿದೆ. ಸರ್ಕಾರದ ಈ ಹಂಚಿಕೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಒಟ್ಟು ರೂ. 137.24 ಕೋಟಿಗಳ ಅನುದಾನ ಮಂಜೂರಾಗಿದೆ. ಈ ಅನುದಾನದ ಅಡಿಯಲ್ಲಿ ಮೊದಲ ಹಂತವಾಗಿ ದಿನಾಂಕ: 01.01.2021 ರಿಂದ 30.11.2021 ರವರೆಗಿನ (ಒಟ್ಟು 11 ತಿಂಗಳ) ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಪಾವತಿಸಲು ಬಿಎಂಟಿಸಿ ಕ್ರಮ ಕೈಗೊಂಡಿದೆ.
ಯಾರಿಗೆ, ಯಾವಾಗ ಹಣ ಸಿಗಲಿದೆ? (ಪಾವತಿಯ ಸಂಪೂರ್ಣ ವಿವರ):
ಸಂಸ್ಥೆಯು ತನ್ನ ನೌಕರರ ಹಿತದೃಷ್ಟಿಯಿಂದ ಈ ಹಣವನ್ನು ಹಂತಹಂತವಾಗಿ ಅತ್ಯಂತ ತ್ವರಿತವಾಗಿ ತಲುಪಿಸಲು ಕೆಳಕಂಡಂತೆ ದಿನಾಂಕಗಳನ್ನು ನಿಗದಿಪಡಿಸಿದೆ:
-
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ: ಸಂಸ್ಥೆಯಲ್ಲಿ ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ನೌಕರರಿಗೆ 11 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಇಂದು (ದಿನಾಂಕ: 16.05.2026) ಅವರವರ ಬ್ಯಾಂಕ್ ಖಾತೆಗಳಿಗೆ ಯಶಸ್ವಿಯಾಗಿ ಜಮಾ ಮಾಡಲಾಗಿದೆ.
-
ಸೇವಾ ವಿಮುಕ್ತ ನೌಕರರು: ದಿನಾಂಕ: 01.01.2021 ರಿಂದ 30.11.2021 ರ ಅವಧಿಯಲ್ಲಿ ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸಿ, ಸದ್ಯ ನಿವೃತ್ತಿ, ಸ್ವಯಂ ನಿವೃತ್ತಿ (VRS), ವಜಾ, ಮರಣ ಹಾಗೂ ರಾಜೀನಾಮೆ ಸೇರಿದಂತೆ ವಿವಿಧ ಕಾರಣಗಳಿಂದ ಸೇವಾ ವಿಮುಕ್ತರಾಗಿರುವ ಅರ್ಹ ಅಧಿಕಾರಿ/ನೌಕರರಿಗೆ ದಿನಾಂಕ: 21.05.2026 ರಂದು ಹಿಂಬಾಕಿ ಮೊತ್ತವನ್ನು ಪಾವತಿಸಲಾಗುವುದು.
-
ಅಂತರ ನಿಗಮ ವರ್ಗಾವಣೆಗೊಂಡವರು: ಇದೇ ಅವಧಿಯಲ್ಲಿ ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಇತರ ಸಾರಿಗೆ ನಿಗಮಗಳಿಗೆ (KSRTC, NWKRTC, KKRTC) ವರ್ಗಾವಣೆಗೊಂಡಿರುವ ಅಧಿಕಾರಿ/ನೌಕರರ ಹಿಂಬಾಕಿ ಮೊತ್ತವನ್ನು ದಿನಾಂಕ: 22.05.2026 ರಂದು ಆಯಾ ಸಂಬಂಧಿತ ನಿಗಮ/ಸಂಸ್ಥೆಗಳ ಖಾತೆಗೆ ವರ್ಗಾಯಿಸಲು ಕ್ರಮ ಜರುಗಿಸಲಾಗುವುದು.
ಸಂಸ್ಥೆಯ ಬದ್ಧತೆ: “ನಮ್ಮ ಅಧಿಕಾರಿಗಳು ಮತ್ತು ನೌಕರರ ಹಿತಾಸಕ್ತಿಯೇ ನಮಗೆ ಮುಖ್ಯ. ಸರ್ಕಾರದ ಆದೇಶವನ್ನು ತಕ್ಷಣವೇ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಅತ್ಯಂತ ತ್ವರಿತವಾಗಿ ಕೈಗೊಳ್ಳಲಾಗಿದೆ” ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ವರ್ಷಗಳಿಂದ ಕಾಯುತ್ತಿದ್ದ ಸಾವಿರಾರು ಸಾರಿಗೆ ನೌಕರರ ಕುಟುಂಬಗಳಲ್ಲಿ ಸಂತಸ ಮೂಡಿದೆ.
BREAKING: ಬೆಳ್ಳಿಯ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ | silver bar imports
BIG NEWS: ಜೂನ್.1ರಂದು ರಾಜ್ಯಾದ್ಯಂತ ಅದ್ಧೂರಿ ‘ಶಾಲಾ ಪ್ರಾರಂಭೋತ್ಸವ’: ಸಿಎಂ ಸಿದ್ದರಾಮಯ್ಯ ಚಾಲನೆ








