ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮಂಗಳವಾರ ಅತ್ಯಂತ ಘೋರ ದುರಂತವೊಂದು ಸಂಭವಿಸಿದೆ. ವಸತಿ ಪ್ರದೇಶದಲ್ಲಿದ್ದ ಅಕ್ರಮ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಭೀಕರ ಸ್ಫೋಟ ಮತ್ತು ಅದರ ಬೆನ್ನಲ್ಲೇ ಆವರಿಸಿದ ಭೀಕರ ಜ್ವಾಲೆಗೆ ಸಿಲುಕಿ ಒಟ್ಟು ಎಂಟು ಜನ ಸಜೀವ ದಹನವಾಗಿದ್ದಾರೆ.
ಜೈಪುರದ ತಲೈ ಕಾಲೋನಿಯ ವಸತಿ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದೆ. ಈ ಮನೆಯಲ್ಲಿ ಭಾರಿ ಪ್ರಮಾಣದ ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ವ್ಯಾಪಿಸಿದ್ದು, ಒಳಗಡೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹೊರಬರಲಾರದೆ ಸಿಲುಕಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಸಹಾಯಕ ಪೊಲೀಸ್ ಕಮಿಷನರ್ ವಿನೋದ್ ಶರ್ಮಾ ಧೃಡಪಡಿಸಿದ್ದಾರೆ. ಐದು ಮಂದಿ ಎಸ್ಎಂಎಸ್ (SMS) ಆಸ್ಪತ್ರೆಯಲ್ಲಿ ಮೃತಪಟ್ಟರೆ, ಒಬ್ಬರನ್ನು ತರುವಷ್ಟರಲ್ಲಿ ಸಾವನ್ನಪ್ಪಿದ್ದರು ಎಂದು ಘೋಷಿಸಲಾಯಿತು. ಮತ್ತೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಸಮೀರ್, ಅಬಿದ್, ನಾಸಿರ್, ಅಬ್ದುಲ್ ವಾಹಿದ್ ಮತ್ತು ಬಿಲಾಲ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಗುರುತು ಇನ್ನು ಪತ್ತೆಯಾಗಬೇಕಿದೆ.
ಅಕ್ರಮ ಕಾರ್ಯಾಚರಣೆ ಶಂಕೆ
ಪ್ರಾಥಮಿಕ ತನಿಖೆಯ ಪ್ರಕಾರ, ಆವರಣದೊಳಗೆ ಸಂಗ್ರಹಿಸಿಡಲಾಗಿದ್ದ ಅತ್ಯಂತ ಜ್ವಲನಕಾರಿ ವಸ್ತುಗಳೇ ಈ ಸ್ಫೋಟಕ್ಕೆ ಕಾರಣ ಎನ್ನಲಾಗಿದ್ದು, ನಿಖರ ಕಾರಣಕ್ಕಾಗಿ ತನಿಖೆ ಮುಂದುವರಿದಿದೆ.








