ಬೆಂಗಳೂರು : ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಿಹಿಸುದ್ದಿ ನೀಡಿದ್ದು, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ ಬರೋಬ್ಬರಿ 56,432 ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆಕ್ಷನ್ ಮೋಡ್ಗೆ ಇಳಿದಿರುವ ಡಿ.ಕೆ. ಶಿವಕುಮಾರ್ ಅವರು, ತಮ್ಮ ಚೊಚ್ಚಲ ಸಚಿವ ಸಂಪುಟ ಸಭೆಯಲ್ಲೇ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಸಿಎಂ, ಕಳೆದ ಸರ್ಕಾರದ ಅವಧಿಯಿಂದ ನನೆಗುದಿಗೆ ಬಿದ್ದಿದ್ದ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಮರುಜೀವ ನೀಡಿದ್ದಾರೆ. ಖಾಲಿಯಿರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ತಕ್ಷಣವೇ ವ್ಯವಸ್ಥಿತ ವೇಳಾಪಟ್ಟಿಯನ್ನು (Time Table) ಸಿದ್ಧಪಡಿಸಿ ಪ್ರಕಟಿಸಬೇಕು ಎಂದು ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಗಡುವು ನೀಡಿದ್ದಾರೆ.
ನಿರುದ್ಯೋಗ ಮುಕ್ತ ಕರ್ನಾಟಕವೇ ನಮ್ಮ ಗುರಿ – ಸಿಎಂ ಡಿ.ಕೆ. ಶಿವಕುಮಾರ್
ಈ ಮಹತ್ವದ ನಿರ್ಧಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ರಾಜ್ಯದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಬೇರುಸಹಿತ ಕಿತ್ತೊಗೆಯುವುದೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಇದೇ ಕಾರಣಕ್ಕಾಗಿ, ಹಿಂದೆ ಘೋಷಣೆಯಾಗಿದ್ದರೂ ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿದ್ದ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ತಕ್ಷಣವೇ ಚಾಲನೆ ನೀಡಲು ಸೂಚಿಸಿದ್ದೇನೆ. ಈ ಪ್ರಕ್ರಿಯೆಗೆ ಇದುವರೆಗೆ ಎದುರಾಗಿದ್ದ ಎಲ್ಲಾ ಕಾನೂನು ಮತ್ತು ಆಡಳಿತಾತ್ಮಕ ತೊಡಕುಗಳನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ವರ್ಷಗಳಿಂದ ಸರ್ಕಾರಿ ನೌಕರಿಗಾಗಿ ಹಗಲಿರುಳು ಶ್ರಮಿಸುತ್ತಿದ್ದ ಲಕ್ಷಾಂತರ ಯುವಕ-ಯುವತಿಯರಿಗೆ ಈ ಆದೇಶವು ಹೊಸ ಭರವಸೆ ಮೂಡಿಸಿದೆ. ಪಾರದರ್ಶಕ ಹಾಗೂ ತ್ವರಿತ ಗತಿಯಲ್ಲಿ ಪರೀಕ್ಷೆಗಳು ಮತ್ತು ನೇಮಕಾತಿ ಪ್ರಕ್ರಿಯೆಗಳು ಮುಕ್ತಾಯಗೊಳ್ಳಲಿದ್ದು, ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಬೀಳಲಿದೆ.







