ಮುಜಾಫರ್ಪುರ: ಬಿಹಾರದ ಮುಜಾಫರ್ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 10 ರೋಗಿಗಳು ಜೀವಂತವಾಗಿ ದಹನಗೊಂಡಿರುವ ಘಟನೆ ನಡೆದಿದೆ. ದುರಂತದ ವೇಳೆ ಆಸ್ಪತ್ರೆಯಲ್ಲಿದ್ದ 20ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದಾಗಿ ಆಸ್ಪತ್ರೆಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನೋಡನೋಡುತ್ತಿದ್ದಂತೆ ಬೆಂಕಿ ಇಡೀ ಕಟ್ಟಡಕ್ಕೆ ಆವರಿಸಿಕೊಂಡಿದ್ದು, ಆಸ್ಪತ್ರೆಯ ತುಂಬೆಲ್ಲಾ ದಟ್ಟವಾದ ಹೊಗೆ ತುಂಬಿಕೊಂಡಿತು. ಇದರಿಂದಾಗಿ ತೀವ್ರ ನಿಗಾ ಘಟಕ (ICU) ಮತ್ತು ವಾರ್ಡ್ಗಳಲ್ಲಿದ್ದ ರೋಗಿಗಳು ಹೊರಬರಲಾರದೆ ಉಸಿರುಗಟ್ಟಿ ಹಾಗೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಬೆಂಕಿ ಹೊತ್ತಿಕೊಂಡ ತಕ್ಷಣ ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಚರಣೆ ನಡೆಸಿದರು. ಆಸ್ಪತ್ರೆಯ ಕಿಟಕಿಗಳನ್ನು ಒಡೆದು ಒಳಗಿದ್ದ 20ಕ್ಕೂ ಹೆಚ್ಚು ರೋಗಿಗಳು ಮತ್ತು ಅವರ ಸಂಬಂಧಿಕರನ್ನು ಸುರಕ್ಷಿತವಾಗಿ ಹೊರಗೆ ತರಲಾಗಿದೆ.” – ಸ್ಥಳೀಯ ಅಧಿಕಾರಿಗಳು ರಕ್ಷಿಸಲ್ಪಟ್ಟವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಮತ್ತೊಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








