ಬೆಂಗಳೂರು : ನೂತನ ಸಚಿವ ಸಂಪುಟದಲ್ಲಿ ತಾವು ಉಪ ಮುಖ್ಯಮಂತ್ರಿ ಆಗಬೇಕು ಎಂಬುದು ವೀರಶೈವ ಲಿಂಗಾಯತ ಸಮಾಜದ ಆಶಯವಾಗಿದೆ. ಈ ಬಾರಿ 36 ಲಿಂಗಾಯತ ಶಾಸಕರು ಜಯ ಸಾಧಿಸಿದ್ದು, ಸೂಕ್ತ ಪ್ರಾತಿನಿಧ್ಯ ದೊರಕುತ್ತದೆ ಎಂಬ ವಿಶ್ವಾಸವನ್ನು ಮಾಜಿ ಸಚಿವ ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ವಿವಿಧ ಮಠಾಧಿಪತಿಗಳು, ಹರಚರ ಗುರುಮೂರ್ತಿಗಳು ತಮಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅವರೆಲ್ಲರ ಅಭಿಮಾನ, ಹಾರೈಕೆಗೆ ತಾವು ಆಭಾರಿ ಎಂದರು.
ನಾನು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಸೇವಾದಳದಿಂದ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು, ಜಿಲ್ಲಾಧ್ಯಕ್ಷನಾಗಿ, ಶಾಸಕನಾಗಿ, ಕಾರ್ಯಾಧ್ಯಕ್ಷನಾಗಿ, ಸಚಿವನಾಗಿ ಸೇವೆ ಸಲ್ಲಿಸಿದ್ದು, ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷನಾಗಿ ಸಂಪುಟದಲ್ಲಿ ತಮ್ಮ ಸಮಾಜದ ಶಾಸಕರಿಗೆ ಹೆಚ್ಚಿನ ಸ್ಥಾನ ನೀಡಬೇಕು ಎಂದು ವರಿಷ್ಠರಿಗೆ ಮನವಿ ಮಾಡಿರುವುದಾಗಿ ತಿಳಿಸಿದ ಈಶ್ವರ ಖಂಡ್ರೆ, ಇಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆ ಸುಗಮವಾಗಿ ನಡೆಯಲಿದೆ. ಉತ್ತಮ ಸರ್ಕಾರವನ್ನೂ ನೂತನ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನೀಡುತ್ತೇವೆ. 2028ರಲ್ಲಿ ಮತ್ತೆ ಮರಳಿ ಅಧಿಕಾರಕ್ಕೆ ಬರುತ್ತೇವೆ ಎಂದರು.
2016ರಲ್ಲಿ ಪೌರಾಡಳಿತ ಸಚಿವನಾಗಿ ಈಗ ಕಳೆದ 3 ವರ್ಷಗಳಲ್ಲಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವನಾಗಿ ಮಾಡಿರುವ ಕಾರ್ಯಗಳ ಬಗ್ಗೆ ತೃಪ್ತಿ ಇದೆ. ಅರಣ್ಯ ಅಪರಾಧ ತಡೆಗೆ ಉಪಗ್ರಹ ಚಿತ್ರ ಬಳಕೆ ಆಗಿರಲಿ, ಆನ್ ಲೈನ್ ಎಫ್.ಐ.ಆರ್. ದಾಖಲಿಸುವುದಾಗಿರಲಿ, ಚಾರಣ, ಸಫಾರಿ ಮತ್ತು ಆನೆ ಧಾಮಗಳಿಗೆ ಹೊಸದಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ ರೂಪಿಸುವುದಾಗಿರಲಿ, ಹಸಿರು ಹೊದಿಕೆ ಹೆಚ್ಚಿಸುವ ಕಾರ್ಯವೇ ಆಗಿರಲಿ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧವೇ ಇರಲಿ ತಾವು ಕೈಗೊಂಡ ಕ್ರಮಗಳಿಗೆ ನಾಡಿನ ಜನರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಕಳೆದ 3 ವರ್ಷದಲ್ಲಿ 8 ಕೋಟಿ ಸಸಿಗಳನ್ನು ನೆಟ್ಟು ಬೆಳೆಸಲಾಗಿದ್ದು, ರೈತರಿಗೆ 3 ಕೋಟಿಗೂ ಹೆಚ್ಚು ಸಸಿ ವಿತರಿಸಲಾಗಿದೆ. ಒಟ್ಟು 11 ಕೋಟಿ ಸಸಿ ನೆಡಲಾಗಿದೆ. ಬೆಂಗಳೂರಿನಲ್ಲಿ 250 ಎಕರೆ ಸೇರಿ ರಾಜ್ಯದಾದ್ಯಂತ 12ಸಾವಿರ ಎಕರೆಗೂ ಹೆಚ್ಚು ಅರಣ್ಯ ಒತ್ತುವರಿ ತೆರವು ಮಾಡಿಸಲಾಗಿದೆ. ಹೊಸದಾಗಿ 15 ಸಾವಿರ ಎಕರೆ ಪ್ರದೇಶವನ್ನು ಅರಣ್ಯ ಎಂದು ಘೋಷಿಸಲಾಗಿದೆ. ಹೆಸರುಘಟ್ಟ ಪ್ರದೇಶವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿ ಶ್ವಾಸತಾಣ ಉಳಿಸಲಾಗಿದೆ. ಬಸವಣ್ಣನವರ ಹೆಸರಲ್ಲಿ 153 ಎಕರೆ ಪ್ರದೇಶದಲ್ಲಿ ಬೃಹತ್ ಉದ್ಯಾನ ನಿರ್ಮಿಸಲು ಕ್ರಮ ವಹಿಸಲಾಗಿದೆ. ಜೊತೆಗೆ ಗುತ್ತಿಗೆ ಭೂಮಿ ಮರು ಪಡೆಯಲು ಕಾನೂನು ಹೋರಾಟ ನಡೆದಿದೆ. ಈ ಎಲ್ಲ ಕಾರ್ಯದ ಬಗ್ಗೆ ತಮಗೆ ತೃಪ್ತಿ ಇದೆ ಎಂದರು.
ಪಕ್ಷ ತಮಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಷ್ಠೆಯಿಂದ ಮತ್ತು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಸಚಿವ ಸ್ಥಾನ ನೀಡಿ: ಕಾಂಗ್ರೆಸ್ ಹೈಕಮಾಂಡ್‌ಗೆ ಸೋಮಶೇಖರ ಲ್ಯಾವಿಗೆರೆ ಆಗ್ರಹ
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








