ರಂಜಾನ್ ಮಾಸದಲ್ಲಿ ವಾರಣಾಸಿಯ ಗಂಗಾ ನದಿಗೆ ಚಿಕನ್ ಬಿರಿಯಾನಿಯ ಉಳಿಕೆಗಳನ್ನು ಎಸೆದ ಆರೋಪದ ಮೇಲೆ ಬಂಧಿತರಾಗಿದ್ದ ಎಂಟು ಜನರಿಗೆ ಜಾಮೀನು ಮಂಜೂರು ಮಾಡುವಾಗ ಅಲಹಾಬಾದ್ ಹೈಕೋರ್ಟ್, “ಈ ಕೃತ್ಯವು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತದೆ ಎಂದು ಸರಿಯಾಗಿಯೇ ಹೇಳಬಹುದು” ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ರಾಜೀವ್ ಲೋಚನ್ ಶುಕ್ಲಾ ಅವರು, “ಈ ಪ್ರಕರಣವು ಮುಸ್ಲಿಂ ಸಮುದಾಯದ ಸದಸ್ಯರು ರೋಜಾ ಇಫ್ತಿಯಾರ್ ಕೂಟವನ್ನು ನಡೆಸುವುದನ್ನು ಮತ್ತು ಆ ಇಫ್ತಿಯಾರ್ ಕೂಟದ ಸಂದರ್ಭವನ್ನು ಒಳಗೊಂಡಿದೆ” ಎಂದು ಗಮನಿಸಿದರು. ಅಲ್ಲದೆ, ಆ ಸಮಯದಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸುತ್ತಾ, ಆರೋಪಿಗಳು “ಅದರ ಉಳಿಕೆಗಳನ್ನು ಗಂಗಾ ನದಿಗೆ” ಎಸೆದಿದ್ದಾರೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.
”ನ್ಯಾಯಾಲಯದ ನಿಷ್ಪಕ್ಷಪಾತ ಅಭಿಪ್ರಾಯದ ಪ್ರಕಾರ, ಈ ಕೃತ್ಯವು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಸರಿಯಾಗಿಯೇ ಹೇಳಬಹುದು. ಆದಾಗ್ಯೂ, ಪ್ರಸ್ತುತ ನ್ಯಾಯಾಲಯದ ಮುಂದೆ ಇರುವ ವಿಷಯವೆಂದರೆ, ತನಿಖೆ ಮತ್ತು ವಿಚಾರಣೆಯ ಅವಧಿಯಲ್ಲಿ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಪರಿಗಣಿಸಬಹುದೇ ಇಲ್ಲವೇ ಎಂಬುದು ಮಾತ್ರ” ಎಂದು ಮೇ 15 ರಂದು ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.
’ಅರ್ಜಿದಾರರು ಕ್ಷಮೆಯಾಚಿಸಿದ್ದಾರೆ’
ನ್ಯಾಯಾಲಯದ ಪ್ರಾಥಮಿಕ ಅಭಿಪ್ರಾಯದ ಪ್ರಕಾರ, ಸಲ್ಲಿಕೆಯಾಗಿರುವ ಅಫಿಡವಿಟ್‌ಗಳು ಅರ್ಜಿದಾರರು ತಮ್ಮ ಕೃತ್ಯಗಳಿಗಾಗಿ ಕ್ಷಮೆಯಾಚಿಸುತ್ತಿರುವುದನ್ನು ತೋರಿಸುತ್ತವೆ. ಮತ್ತು ಅವರ ಕುಟುಂಬಸ್ಥರು ಸಹ ಇದರಿಂದ ಸಮಾಜಕ್ಕೆ ಉಂಟಾದ ನೋವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಕ್ರಿಮಿನಲ್ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಯನ್ನು ಎದುರಿಸುತ್ತಿರುವಾಗ, ಜೈಲಿನಲ್ಲಿರುವ ವ್ಯಕ್ತಿಯ ಪರವಾಗಿ ಅಫಿಡವಿಟ್ ಸಲ್ಲಿಸುವವರು ಅಪರಾಧವನ್ನು ನಿರ್ದಿಷ್ಟವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಹಾಗೂ ಜಾಮೀನು ಮಂಜೂರು ಮಾಡುವುದನ್ನು ಪರಿಗಣಿಸುವಾಗ ಅಪರಾಧದ ಒಪ್ಪಿಗೆ ಕಡ್ಡಾಯವಲ್ಲ ಎಂಬುದನ್ನು ನ್ಯಾಯಾಲಯ ಅರ್ಥಮಾಡಿಕೊಂಡಿದೆ.
ಆದಾಗ್ಯೂ, ನ್ಯಾಯಾಲಯದ ಮುಂದೆ ಜಾಮೀನು ಅರ್ಜಿಯ ಬೆಂಬಲವಾಗಿ ಸಲ್ಲಿಕೆಯಾಗಿರುವ ಅಫಿಡವಿಟ್‌ಗಳು ಮತ್ತು ಅರ್ಜಿದಾರರ ಪರ ವಕೀಲರ ವಾದಗಳು, ಆರೋಪಿಗಳು ತಮ್ಮ ಕೃತ್ಯಗಳಿಗಾಗಿ ಪ್ರಾೂಮಾಣಿಕ ಪಶ್ಚಾತ್ತಾಪ ಪಡುತ್ತಿರುವುದನ್ನು ತೋರಿಸುತ್ತವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷ ಪ್ರಾಯದ 14 ಜನರನ್ನು ಬಂಧಿಸಲಾಗಿತ್ತು ಮತ್ತು ಅವರು ಸುಮಾರು ಎರಡು ತಿಂಗಳ ಕಾಲ ಜೈಲಿನಲ್ಲಿದ್ದರು. ಈ ವ್ಯಕ್ತಿಗಳ ಮೇಲೆ “ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು”, ಪೂಜಾ ಸ್ಥಳವನ್ನು “ಅಪವಿತ್ರಗೊಳಿಸುವುದು”, “ಸುಲಿಗೆ” (Extortion) ಹಾಗೂ ಮಾಲಿನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಏನಿದು ಪ್ರಕರಣ?
ಮಾರ್ಚ್ 17 ರಂದು ಮೋಟಾರ್ ಬೋಟ್‌ನಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದರು. ಈ ದೃಶ್ಯಾವಳಿಯನ್ನು ಸ್ವತಃ ಆರೋಪಿಗಳೇ ಅಪ್‌ಲೋಡ್ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು. ಇದರ ಬೆನ್ನಲ್ಲೇ, ಭಾರತೀಯ ಜನತಾ ಯುವ ಮೋರ್ಚಾದ (BJYM) ಜಿಲ್ಲಾಧ್ಯಕ್ಷ ರಜತ್ ಜೈಸ್ವಾಲ್ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅದರಂತೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 298 (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಅಪವಿತ್ರಗೊಳಿಸುವುದು), 299 (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ದುರುದ್ದೇಶಪೂರಿತ ಕೃತ್ಯಗಳು), 196 (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 223 (ಸುಳ್ಳು ಎಂದು ತಿಳಿದಿರುವ ಪುರಾವೆಗಳನ್ನು ಬಳಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.








