ವಿಜ್ಞಾನ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಕ್ರಾಂತಿ ಸೃಷ್ಟಿಸಿರುವ ‘ಚಾಟ್‌ಜಿಪಿಟಿ’ (ChatGPT) ನಂತಹ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಉಪಕರಣಗಳು ಈಗ ಕೇವಲ ಕಚೇರಿ ಕೆಲಸ, ಕೋಡಿಂಗ್ ಅಥವಾ ಇಮೇಲ್ ಬರೆಯುವುದಕ್ಕಷ್ಟೇ ಸೀಮಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಅತ್ಯಂತ ಆಪ್ತ ಹಾಗೂ ವೈಯಕ್ತಿಕ ವಿಷಯಗಳಾದ ಪ್ರೀತಿ, ಪ್ರೇಮ ಮತ್ತು ದಾಂಪತ್ಯದ ಸಮಸ್ಯೆಗಳಿಗೂ ಚಾಟ್‌ಜಿಪಿಟಿ ಮೊರೆ ಹೋಗುತ್ತಿದ್ದಾರೆ!
ಹೌದು, ಆಧುನಿಕ ಜೋಡಿಗಳ ನಡುವಿನ ಜಗಳವನ್ನು ತಣ್ಣಗಾಗಿಸುವುದರಿಂದ ಹಿಡಿದು, ವಿಚ್ಛೇದನ (Divorce) ಪಡೆಯುವ ದೊಡ್ಡ ನಿರ್ಧಾರಗಳವರೆಗೂ ಚಾಟ್‌ಜಿಪಿಟಿ ಪ್ರಮುಖ ಪಾತ್ರ ವಹಿಸುತ್ತಿರುವ ಆಘಾತಕಾರಿ ಹಾಗೂ ಆಸಕ್ತಿದಾಯಕ ವಿಷಯ ಜಾಗತಿಕ ಮಟ್ಟದಲ್ಲಿ ಮುನ್ನೆಲೆಗೆ ಬಂದಿದೆ.
ಅಜ್ಜಿಯ ಸ್ಥಾನ ತುಂಬಿದ ಚಾಟ್‌ಜಿಪಿಟಿ!
”ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸಂಸಾರದಲ್ಲಿ ಏನಾದರೂ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದರೆ ಜನರು ತಮ್ಮ ಅಜ್ಜಿ, ಅತ್ತೆ ಅಥವಾ ಆಪ್ತ ಸ್ನೇಹಿತರ ಬಳಿ ಸಲಹೆ ಕೇಳುತ್ತಿದ್ದರು. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಆ ಜಾಗವನ್ನು ಚಾಟ್‌ಜಿಪಿಟಿ ಆಕ್ರಮಿಸಿಕೊಂಡಿದೆ,” ಎಂದು ಭಾರತದ ಪ್ರಮುಖ ಡಿವೋರ್ಸ್ ವಕೀಲೆ ಮತ್ತು ಲೇಖಕಿ ವಂದನಾ ಶಾ ತಿಳಿಸಿದ್ದಾರೆ.
ನ್ಯಾಯಾಲಯಕ್ಕೆ ಬರುವ ದಂಪತಿಗಳು ಈಗ, “ನನ್ನ ಮದುವೆ ಮುರಿದುಬಿದ್ದಿದೆ ಎಂದು ಚಾಟ್‌ಜಿಪಿಟಿ ಹೇಳುತ್ತಿದೆ,” ಎಂಬ ಆಧಾರಗಳನ್ನು ನೀಡುತ್ತಿರುವುದು ವಕೀಲರನ್ನೇ ಚಕಿತಗೊಳಿಸಿದೆ. ಸಮಾಜದಲ್ಲಿ ವಿಚ್ಛೇದನದ ಬಗ್ಗೆ ಇರುವ ಮುಜುಗರದಿಂದ ತಪ್ಪಿಸಿಕೊಳ್ಳಲು ಜನರು ಯಾವುದೇ ತೀರ್ಪು ನೀಡದ (Non-judgmental) ಮತ್ತು ಅತ್ಯಂತ ರಹಸ್ಯ ಕಾಯ್ದುಕೊಳ್ಳುವ ಎಐ ಬಾಟ್‌ಗಳ ಬಳಿ ತಮ್ಮ ಮನಸ್ಸು ಬಿಚ್ಚಿಡುತ್ತಿದ್ದಾರೆ.
ಚಾಟ್‌ಜಿಪಿಟಿಯಿಂದ ಡಿವೋರ್ಸ್ ಆದ ಕಥೆ!
ಇತ್ತೀಚೆಗೆ ವಿದೇಶದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ವರ್ತನೆಯಲ್ಲಿನ ಬದಲಾವಣೆಯನ್ನು ಗಮನಿಸಿ, ಇಡೀ ಪ್ರಕರಣದ ವಿವರಗಳನ್ನು ಚಾಟ್‌ಜಿಪಿಟಿಗೆ ಉಣಿಸಿ “ನನ್ನ ಗಂಡ ಬೇರೆ ಹೆಣ್ಣಿನೊಂದಿಗೆ ಸಂಬಂಧ ಹೊಂದಿದ್ದಾನೆಯೇ?” ಎಂದು ಪ್ರಶ್ನಿಸಿದ್ದಳು. ಚಾಟ್‌ಜಿಪಿಟಿ ನೀಡಿದ ಡೇಟಾ ಆಧಾರಿತ ವಿಶ್ಲೇಷಣೆ ಮತ್ತು ಸಂಶಯದ ಉತ್ತರವನ್ನು ಸತ್ಯ ಎಂದು ನಂಬಿದ ಆಕೆ, ಗಂಡನಿಗೆ ಯಾವುದೇ ನೋಟಿಸ್ ನೀಡದೆ ನೇರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಸದ್ದು ಮಾಡಿದ್ದಳು.
ಇನ್ನೊಂದೆಡೆ, ಲಾಸ್ ಏಂಜಲೀಸ್‌ನ ದಂಪತಿಯೊಂದು ಕೋರ್ಟ್ ಮೆಟ್ಟಿಲೇರುವ ಮುನ್ನ ಚಾಟ್‌ಜಿಪಿಟಿಯನ್ನು ಮಧ್ಯಸ್ಥಗಾರನನ್ನಾಗಿ (Mediator) ಬಳಸಿ, ತಿಂಗಳಿಗೆ ಸಾವಿರಾರು ಡಾಲರ್ ಕೌನ್ಸೆಲಿಂಗ್ ಹಣವನ್ನು ಉಳಿಸಿ ತಮ್ಮ ಸಂಸಾರವನ್ನು ಸರಿಪಡಿಸಿಕೊಂಡ ಉದಾಹರಣೆಯೂ ಇದೆ!
ಎಐ (AI) ಕೌನ್ಸೆಲಿಂಗ್‌ನಲ್ಲಿರುವ ಅಪಾಯಗಳೇನು?
ಮನೋವಿಜ್ಞಾನಿಗಳು ಮತ್ತು ಕೌನ್ಸಿಲರ್‌ಗಳ ಪ್ರಕಾರ, ಸಂಬಂಧಗಳ ಮೌಲ್ಯಮಾಪನಕ್ಕೆ ಚಾಟ್‌ಜಿಪಿಟಿ ಬಳಸುವುದು ಅತ್ಯಂತ ಅಪಾಯಕಾರಿ.
ಒನ್-ಸೈಡೆಡ್ ಸ್ಟೋರಿ (ಏಕಪಕ್ಷೀಯ ವಾದ): ಚಾಟ್‌ಜಿಪಿಟಿಗೆ ಬಳಕೆದಾರರು ತಮಗೆ ಬೇಕಾದ ಮಾಹಿತಿ ಅಥವಾ ತಮ್ಮ ಪರವಾಗಿರುವ ಕಥೆಯನ್ನು ಮಾತ್ರ ನೀಡುತ್ತಾರೆ. ಎಐ ಕೇವಲ ಆ ಮಾಹಿತಿಯ ಆಧಾರದ ಮೇಲೆ ನಿಮ್ಮನ್ನು ಸಮಾಧಾನಪಡಿಸುವ ಅಥವಾ ನಿಮ್ಮ ವಾದವನ್ನು ಬೆಂಬಲಿಸುವ ಉತ್ತರ ನೀಡುತ್ತದೆ.
ಭಾವನೆಗಳ ಕೊರತೆ: ಮನುಷ್ಯರಲ್ಲಿರುವಂತೆ ಎಐಗೆ ಭಾವನೆಗಳು (Empathy) ಮತ್ತು ಸಂದರ್ಭೋಚಿತ ತಿಳುವಳಿಕೆ ಇರುವುದಿಲ್ಲ. ಅದು ಕೇವಲ ಇಂಟರ್ನೆಟ್‌ನಲ್ಲಿರುವ ಡೇಟಾ ಪ್ಯಾಟರ್ನ್ ಬಳಸಿ ತರ್ಕಬದ್ಧ ಉತ್ತರ ನೀಡುತ್ತದೆಯೇ ಹೊರತು ಮನಸ್ಸಿನ ನೋವನ್ನು ಅರಿಯಲಾರದು.
ಭ್ರಮೆಯ ಸೃಷ್ಟಿ: ಎಐ ನೀಡುವ ಸಲಹೆಗಳು ಕೆಲವೊಮ್ಮೆ ಸರಿ ಎನಿಸಿದರೂ, ಅದು ಮನುಷ್ಯರಲ್ಲಿ ಮತ್ತಷ್ಟು ಅನುಮಾನ ಮತ್ತು ಪ್ಯಾರನೋಯಾ (ಅತಿಯಾದ ಆತಂಕ) ಸೃಷ್ಟಿಸಿ, ಸಣ್ಣ ಜಗಳವನ್ನು ದೊಡ್ಡ ವಿಚ್ಛೇದನದ ನಿರ್ಧಾರಕ್ಕೆ ತಳ್ಳಬಹುದು.








