ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ನೀತಿಯಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಪ್ರವೇಶ ಸಂಖ್ಯೆ ಕಡಿಮೆಯಾಗುತ್ತಿದ್ದು, ಶಿಕ್ಷಣ ಸಚಿವರ ಗೊಂದಲಮಯ ನೀತಿಗಳು ರಾಜ್ಯದಲ್ಲಿನ ಮಕ್ಕಳ ಭವಿಷ್ಯವನ್ನು ಮಂಕು ಮಾಡಿದೆ. ರಾಜ್ಯದ ಹಿತದೃಷ್ಟಿಯಿಂದ ಮತ್ತು ಶೈಕ್ಷಣಿಕ ಕ್ಷೇತ್ರದ ಮೌಲ್ಯಗಳನ್ನು ಸಂರಕ್ಷಣೆ ಮಾಡಲು ಬಿ.ಸಿ.ನಾಗೇಶ್ ( Minister BC Nagesh ) ರವರನ್ನು ಸಂಪುಟದಿಂದ ಕೈಬಿಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ( Farmer MLC Ramesh Babu ) ಒತ್ತಾಯಿಸಿದ್ದಾರೆ.
ರೈತರಿಗೆ ಸದಾ ಪ್ರೋತ್ಸಾಹ ನೀಡುವ ಬಿಜೆಪಿ – ರೈತ ಮೋರ್ಚಾ ಪ್ರಭಾರಿ ಎನ್.ರವಿಕುಮಾರ್
ಇಂದು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಕರ್ನಾಟಕ ರಾಜ್ಯದ ಹಿಂದಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು 15-09-2017 ಮತ್ತು 27-09-2017 ರಂದು ತಮ್ಮ ಅಧ್ಯಕ್ಷತೆಯಲ್ಲಿ ಸತತ 7 ತಾಸುಗಳ ಸಭೆ ನಡೆಸಿ ಶಿಕ್ಷಕರು/ಉಪನ್ಯಾಸಕರು, ಶಿಕ್ಷಣ ಕ್ಷೇತ್ರ, ವಿದ್ಯಾರ್ಥಿಗಳ ಹಿತಾಸಕ್ತಿಗೆ ಸಂಬಂಧಿಸಿದಂತೆ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ತಿನ ಸದಸ್ಯರು, ಅಂದಿನ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವರು, ಆರ್ಥಿಕ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಒಟ್ಟು 36 ವಿಷಯಗಳ ಕುರಿತು ಸರ್ಕಾರದ ತೀರ್ಮಾನಗಳನ್ನು ಕೈಗೊಂಡು, ಬಹು ವರ್ಷಗಳಿಂದ ಬಾಕಿ ಇದ್ದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯವಾದ ಆದೇಶಗಳನ್ನು ಜಾರಿಗೊಳಿಸಿದರು ಎಂದಿದ್ದಾರೆ.
ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ಬಿಜೆಪಿ ಮೋಡಿ – MLC ಎನ್.ರವಿಕುಮಾರ್
ಈಗಿನ ರಾಜ್ಯ ಬಿಜೆಪಿ ಸರ್ಕಾರಕ್ಕೆ ಶಿಕ್ಷಕರ/ಉಪನ್ಯಾಸಕರ, ಶಿಕ್ಷಣ ಕ್ಷೇತ್ರದ, ವಿದ್ಯಾರ್ಥಿಗಳ ಅಥವಾ ಖಾಸಗಿ ಆಡಳಿತ ಮಂಡಳಿಗಳ ಸಮಸ್ಯೆಗಳನ್ನು ಬಗೆಹರಿಸುವ ಯಾವುದೇ ಇಚ್ಚಾಶಕ್ತಿ ಇರುವುದಿಲ್ಲ. ಮುಖ್ಯಮಂತ್ರಿಗಳಾಗಲಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಾಗಲಿ ಶೈಕ್ಷಣಿಕ ವಿಷಯಗಳಿಗೆ ಒತ್ತು ಕೊಡುವ ಬದಲು ತಮ್ಮ ಹಿತಾಸಕ್ತಿಗಳಿಗೆ ಆದ್ಯತೆ ನೀಡಿ ಇಡೀ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು ಕಲುಶಿತಗೊಳಿಸಿರುತ್ತಾರೆ. ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ತೆಗೆದುಕೊಳ್ಳಬೇಕಾದ ತೀರ್ಮಾನಗಳನ್ನು ಮನಸೋಯಿಚ್ಚೆ ವರ್ಷದ ಮಧ್ಯಭಾಗದಲ್ಲಿ ಮತ್ತು ಕೊನೆಯ ಭಾಗದಲ್ಲಿ ಕೈಗೊಳ್ಳುವ ಮೂಲಕ ಗೊಂದಲಗಳನ್ನು ಪದೇ ಪದೇ ಸೃಷ್ಟಿ ಮಾಡಿದ್ದಾರೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಮೊದಲನೇ ತರಗತಿಗೆ ಮಕ್ಕಳನ್ನು ದಾಖಲು ಮಾಡುವ ವಯೋಮಿತಿಯಿಂದ ಹಿಡಿದು, ಪಠ್ಯ ಪುಸ್ತಕಗಳ ಪೂರೈಕೆ, ಸಮವಸ್ತçಗಳ ಪೂರೈಕೆ, ಶೂ ಮತ್ತು ಸಾಕ್ಸ್ ಪೂರೈಕೆ, ಬಿಸಿಯೂಟದ ಆಯೋಜನೆ, ಸೈಕಲ್ ಪೂರೈಕೆ, ವಿದ್ಯಾರ್ಥಿವೇತನದ ಹಂಚಿಕೆ, ಅಗತ್ಯ ಶಿಕ್ಷಕರ ನೇಮಕ ಇತ್ಯಾದಿ ವಿಚಾರಗಳಲ್ಲಿ ಸಚಿವ ಬಿ.ಸಿ.ನಾಗೇಶ್ ರವರು ಸಂಪೂರ್ಣ ವೈಫಲ್ಯ ಕಂಡಿರುತ್ತಾರೆ. ಪ್ರತೀ ಆರ್ಥಿಕ ವರ್ಷ ಸುಮಾರು ಆರು ನೂರು ಕೋಟಿ ರೂಪಾಯಿ ಸರ್ಕಾರಿ ಶಾಲಾ ಕಾಲೇಜುಗಳ ರಿಪೇರಿಗಾಗಿ ಹಣ ಖರ್ಚು ಮಾಡಲಾಗುತ್ತದೆ. ಈ ವರ್ಷ 1200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸರ್ಕಾರಿ ಶಾಲಾ ಕೊಠಡಿಗಳನ್ನು ನಿರ್ಮಿಸುವುದಾಗಿ ಹೇಳಿರುತ್ತಾರೆ. ಆದರೆ ಇಲ್ಲಿಯವರೆಗೆ ಆಯವ್ಯಯದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾದ ಹಣದ ವಿವರ, ವಾರ್ಷಿಕ ಶಾಲಾ ಕೊಠಡಿಗಳ ನಿರ್ಮಾಣದ ವಿವರ, ಬಿಡುಗಡೆಯಾದ ಹಣದ ವಿವರ ನೀಡದೆ ರಾಜ್ಯ ಸರ್ಕಾರವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ 1 ರಿಂದ 10ನೇ ತರಗತಿಯವರೆಗೆ ಸುಮಾರು ಒಂದು ಕೋಟಿ ಆರು ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಪಿಯು ತರಗತಿಯಲ್ಲಿ ಸುಮಾರು ಹದಿಮೂರು ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 47 ಸಾವಿರ ಸರ್ಕಾರಿ ಶಾಲೆಗಳು ಸುಮರು 5715 ಪಿಯು ಕಾಲೇಜುಗಳಿದ್ದು, 58 ಲಕ್ಷ ಮಕ್ಕಳು ಬಿಸಿಯೂಟದ ಯೋಜನೆಯ ಅಡಿಯಲ್ಲಿ ಬರುತ್ತಾರೆ. ಸರ್ಕಾರದ ಅವೈಜ್ಞಾನಿಕ ನೀತಿಯಿಂದ ವರ್ಷಕ್ಕೆ ಸುಮಾರು ಎರಡು ಲಕ್ಷ ಆರ್.ಟಿ.ಇ ಪ್ರವೇಶ ಪಡೆಯುತ್ತಿದ್ದ ಮಕ್ಕಳ ಸಂಖ್ಯೆ ಈಗ ವರ್ಷಕ್ಕೆ 1600 ಕ್ಕೆ ಕುಸಿದಿದೆ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ನೀತಿಯಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಪ್ರವೇಶ ಸಂಖ್ಯೆ ಕಡಿಮೆಯಾಗುತ್ತಿದ್ದು, ಶಿಕ್ಷಣ ಸಚಿವರ ಗೊಂದಲಮಯ ನೀತಿಗಳು ರಾಜ್ಯದಲ್ಲಿನ ಮಕ್ಕಳ ಭವಿಷ್ಯವನ್ನು ಮಂಕು ಮಾಡಿದೆ. ರಾಜ್ಯದ ಹಿತದೃಷ್ಟಿಯಿಂದ ಮತ್ತು ಶೈಕ್ಷಣಿಕ ಕ್ಷೇತ್ರದ ಮೌಲ್ಯಗಳನ್ನು ಸಂರಕ್ಷಣೆ ಮಾಡಲು ಬಿ.ಸಿ.ನಾಗೇಶ್ ರವರನ್ನು ಸಂಪುಟದಿಂದ ಕೈಬಿಡಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ. ಇವರ ಅವಧಿಯಲ್ಲಿ ಕೈಗೊಂಡಿರುವ ಶಿಕ್ಷಣ ಇಲಾಖೆಯ ಎಲ್ಲಾ ತೀರ್ಮಾನಗಳನ್ನು ಮತ್ತೊಮ್ಮೆ ಪುನರ್ ಪರಿಶೀಲನೆ ಮಾಡಬೇಕಾಗಿ ಕೋರಿದ್ದಾರೆ.