ತುಮಕೂರು : ಡಿ.ಕೆ. ಶಿವಕುಮಾರ್ ಕಾಂಗ್ರೆಸ್ನಿಂದ ಹೊರಬಂದು ಬಿಜೆಪಿಗೆ ಬಾಹ್ಯ ಬೆಂಬಲ ಕೊಟ್ಟರೆ ಒಪ್ಪುತ್ತೇವೆ. ಆದರೆ ಅವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದರೆ ಅದು ಕೇಂದ್ರದ ನಿರ್ಧಾರಕ್ಕೆ ಬಿಟ್ಟ ವಿಚಾರ. ಅಲ್ಲದೇ ಕೇಂದ್ರದ ವರಿಷ್ಠರು ಅವರನ್ನೇ ಮುಖ್ಯಮಂತ್ರಿ ಮಾಡಲು ನಾವೇ ಡಿ.ಕೆ. ಶಿವಕುಮಾರ್ಗೆ ಬಾಹ್ಯ ಬೆಂಬಲ ಕೊಡುತ್ತೇವೆ ಎಂದರೆ ನಾವು ಒಪ್ಪುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ತಿಳಿಸಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ನಾವು ಅವರೊಂದಿಗೆ ಸೇರಿ ಸರಕಾರವನ್ನೂ ಮಾಡಲ್ಲ. ಪಕ್ಷದಿಂದ ಹೊರಬಂದು ಚುನಾವಣೆ ಮಾಡುವುದು ಕಷ್ಟ. ಅಕಸ್ಮಾತ್ ಕೇಂದ್ರದವರು ಡಿ.ಕೆ. ಶಿವಕುಮಾರ್ಗೆ ಮುಖ್ಯಮಂತ್ರಿ ಆಗಲು ಬಾಹ್ಯ ಬೆಂಬಲ ಕೊಡಿ ಎಂದರೆ ಅದಕ್ಕೆ ನಮ್ಮ ಯಾವುದೇ ತಕರಾರರಿಲ್ಲ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಘನತೆ, ಗೌರವ, ಮಾನ, ಮರ್ಯಾದೆ ಇದೆಲ್ಲವೂ ಇದ್ದರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಸರಕಾರ ವಿಸರ್ಜನೆ ಮಾಡಿ ಜನಾಶಿರ್ವಾದ ಪಡೆದುಕೊಂಡು ಬರಲಿ ಎಂದರು.
70 ಜನ ಶಾಸಕರು ಡಿ.ಕೆ. ಶಿವಕುಮಾರ್ ಜೊತೆ ಇದ್ದರೆ ಅವರನ್ನೇ ಕಾಂಗ್ರೆಸ್ ಮುಖ್ಯಮಂತ್ರಿ ಮಾಡುತ್ತದೆ. ಅಲ್ಲದೇ ಕಾಂಗ್ರೆಸ್ನ ಯಾವ ಶಾಸಕರೂ ಇದಕ್ಕೆ ವಿರೋಧ ಮಾಡಲ್ಲ. ಏಕೆಂದರೆ ಪುನಃ ಚುನಾವಣೆಗೆ ಹೋದರೆ ಗೆಲ್ಲುವುದಿಲ್ಲ ಎಂಬ ಖಾತ್ರಿ ಇದೆ. ಮೋದಿ ಮತ್ತು ಅಮಿಶ್ ಶಾ ಹೇಳಿದಂತೆ ನಾವು ಕೇಳುತ್ತೇವೆ. ಬಿಜೆಪಿಗೆ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುವ ವಿಶ್ವಾಸ ಇರುವಾಗ ಅವರೊಂದಿಗೆ ಸೇರಿದಂತೆ ಸರಕಾರ ಮಾಡುವ ಬಗ್ಗೆ ಸ್ವಲ್ಪ ಆಲೋಚನೆ ಮಾಡಬೇಕಿರುತ್ತದೆ. ಮಧ್ಯಂತರ ಚುನಾವಣೆ ಆಗಬಾರದು ಎಂದರು.








