ಬೆಂಗಳೂರು/ದಾವಣಗೆರೆ: ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಿ, ನಕಲಿ ಆಡಿಯೋವನ್ನು ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ವೈರಲ್ ಮಾಡಿದ ಕಿಡಿಗೇಡಿಗಳ ವಿರುದ್ಧ ದಾವಣಗೆರೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಾಗಿದೆ.
ಸಿರಾಜ್ ಎಂಬುವವರು ಈ ಕುರಿತು ಅಧಿಕೃತವಾಗಿ ದೂರು ದಾಖಲಿಸಿದ್ದು, ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೂರಿನಲ್ಲೇನಿದೆ? ರಾಜಕೀಯ ಷಡ್ಯಂತ್ರದ ಆರೋಪ:
ದೂರುದಾರರಾದ ಸಿರಾಜ್ ಅವರು, “ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ನನ್ನ ವಿರುದ್ಧ ವ್ಯವಸ್ಥಿತವಾಗಿ ರಾಜಕೀಯ ಷಡ್ಯಂತ್ರ ರೂಪಿಸಲಾಗಿದೆ. ಇದರ ಭಾಗವಾಗಿಯೇ ನಮ್ಮಿಬ್ಬರ ಹೆಸರನ್ನು ಬಳಸಿ ಸೃಷ್ಟಿಸಲಾಗಿರುವ ಸಂಪೂರ್ಣ ನಕಲಿ (Fake) ಆಡಿಯೋ ಒಂದನ್ನು ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ಮೂಲಕ ಸಾರ್ವಜನಿಕವಾಗಿ ನಮಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ದೂರಿನಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.
ಕಠಿಣ ಕ್ರಮಕ್ಕೆ ಆಗ್ರಹ:
ನಮ್ಮ ತೇಜೋವಧೆ ಮಾಡಲು ಈ ರೀತಿ ನಕಲಿ ಆಡಿಯೋ ಸೃಷ್ಟಿಸಿ, ವೈರಲ್ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣವೇ ಪತ್ತೆ ಹಚ್ಚಬೇಕು. ಈ ತಂತ್ರಜ್ಞಾನದ ದುರ್ಬಳಕೆ ಹಾಗೂ ರಾಜಕೀಯ ಪಿತೂರಿಯ ಇಡೀ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿರಾಜ್ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
ದೂರು ಸ್ವೀಕರಿಸಿರುವ ದಾವಣಗೆರೆ ಸೈಬರ್ ಇಲಾಖೆಯ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (IT Act) ಪ್ರಕರಣ ದಾಖಲಿಸಿಕೊಂಡಿದ್ದು, ಆಡಿಯೋದ ಮೂಲ ಹಾಗೂ ಅದನ್ನು ಹರಡಿದವರ ಜಾಡು ಹಿಡಿಯಲು ಮುಂದಾಗಿದ್ದಾರೆ.
ನಾನು ಸಿಎಂ ಆದ್ಮೇಲೆ ರಾಮಲಿಂಗಾರೆಡ್ಡಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡ್ತೀನಿ ಅಂದಿದ್ದು ನಿಜ: ಡಿ.ಕೆ. ಶಿವಕುಮಾರ್!








