ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನೂತನ ಖಾತೆಗಳ ಹಂಚಿಕೆಯಾಗುತ್ತಿದ್ದಂತೆಯೇ ಕೆಲವೆಡೆ ಅಸಮಾಧಾನದ ಹೊಗೆಯಾಡುತ್ತಿರುವ ಬೆನ್ನಲ್ಲೇ, ಹಿರಿಯ ನಾಯಕ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಾವೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂಬುದನ್ನು ಪುನರುಚ್ಚರಿಸಿದ್ದಾರೆ. ಅಲ್ಲದೇ ಸಚಿವ ಸ್ಥಾನಕ್ಕೆ ರಾಜೀನಾಮೆ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಪ್ರಬುದ್ಧವಾಗಿ ಉತ್ತರಿಸಿದ ಅವರು, ಪಕ್ಷದ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿದರು.
ನನಗೆ ಕಾಂಗ್ರೆಸ್ ಎಲ್ಲವನ್ನೂ ಕೊಟ್ಟಿದೆ
ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ತಮಗೆ ಯಾವುದೇ ಅಸಮಾಧಾನವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಸಚಿವ ಜಾರ್ಜ್, “ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ, ನಾನು ಕಾಂಗ್ರೆಸ್ ಪಕ್ಷದ ಒಬ್ಬ ಶಿಸ್ತಿನ ಸಿಪಾಯಿ. ನನಗೆ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿದೆ ಮತ್ತು ಗೌರವಿಸಿದೆ. ಈಗಲೂ ಸಹ ಪಕ್ಷ ನನಗೆ ದೊಡ್ಡ ಜವಾಬ್ದಾರಿಯನ್ನೇ ನೀಡಿದೆ” ಎಂದು ಹೇಳಿದರು.
ಹೈಕಮಾಂಡ್ ಹಾಗೂ ಸಿಎಂ-ಡಿಸಿಎಂಗೆ ಧನ್ಯವಾದ
ತಮಗೆ ನಿಯೋಜಿಸಲಾದ ಇಲಾಖೆಯ ಜವಾಬ್ದಾರಿಯನ್ನು ಸ್ವೀಕರಿಸಿರುವ ಅವರು ಪಕ್ಷದ ಎಲ್ಲಾ ವರಿಷ್ಠರಿಗೂ ಧನ್ಯವಾದ ಅರ್ಪಿಸಿದರು. “ನನಗೆ ಈ ಜವಾಬ್ದಾರಿ ನೀಡಿರುವುದಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಎಲ್ಲಾ ಮುಖಂಡರಿಗೂ ನಾನು ಧನ್ಯವಾದಗಳನ್ನು ಹೇಳುತ್ತೇನೆ” ಎಂದರು.
ಅತೃಪ್ತಿಯ ಪ್ರಶ್ನೆಯೇ ಇಲ್ಲ, ರಾಜೀನಾಮೆ ಮಾತು ಇಲ್ಲ
ಮುಂದುವರಿದು ಮಾತನಾಡಿದ ಅವರು, “ನಾನು ಯಾವುದೇ ರೀತಿಯ ಅಸಮಾಧಾನ ಅಥವಾ ಅತೃಪ್ತಿಯಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನನ್ನ ಮೇಲೆ ನಂಬಿಕೆ ಇಟ್ಟು ದೊಡ್ಡ ಜವಾಬ್ದಾರಿಯನ್ನು ನೀಡುತ್ತಾ ಬಂದಿದೆ. ಪಕ್ಷದ ತೀರ್ಮಾನಕ್ಕೆ ನಾನು ಯಾವಾಗಲೂ ಬದ್ಧನಾಗಿದ್ದು, ಸದಾ ಸಕ್ರಿಯವಾಗಿ ಕೆಲಸ ಮಾಡುತ್ತೇನೆ” ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಹರಿದಾಡುತ್ತಿದ್ದ ರಾಜೀನಾಮೆ ವದಂತಿಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
ಗೃಹ ಪ್ರವೇಶದ 2ನೇ ದಿನವೇ ಕಾಂಗ್ರೆಸ್ ಪಕ್ಷದ ಮನೆಯ ಚಾವಣಿ ಕುಸಿದು ಬಿದ್ದಿದೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ








