ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ ರಾಜ್ಯದ ವಿಂಬರ್ಲಿ ಎಂಬಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ‘ಪಿಕಲ್‌ಬಾಲ್’ (Pickleball) ಕ್ರೀಡಾಪಟುಗಳಾಗಿದ್ದು, ಪಂದ್ಯಾವಳಿಯೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರಿಲ್ಲೋದಿಂದ ನ್ಯೂ ಬ್ರಾನ್‌ಫೆಲ್ಸ್‌ಗೆ ತೆರಳುತ್ತಿದ್ದ ‘ಸೆಸ್ನಾ 421 ಸಿ’ (Cessna 421C) ಎಂಬ ಸಣ್ಣ ವಿಮಾನವು ಗುರುವಾರ ತಡರಾತ್ರಿ ಸುಮಾರಿಗೆ ಜನವಸತಿ ಪ್ರದೇಶದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಟೆಕ್ಸಾಸ್ ಸಾರ್ವಜನಿಕ ಸುರಕ್ಷತಾ ಇಲಾಖೆ ಖಚಿತಪಡಿಸಿದೆ.
ಮೃತಪಟ್ಟವರು ‘ಅಮರಿಲ್ಲೋ ಪಿಕಲ್‌ಬಾಲ್ ಕ್ಲಬ್’ ಸದಸ್ಯರಾಗಿದ್ದರು. ಪಂದ್ಯಾವಳಿಗಾಗಿ ನ್ಯೂ ಬ್ರಾನ್‌ಫೆಲ್ಸ್‌ಗೆ ಪ್ರಯಾಣಿಸುತ್ತಿದ್ದರು ಎಂದು ಕ್ಲಬ್ ಅಧ್ಯಕ್ಷರು ತಿಳಿಸಿದ್ದಾರೆ.ವಿಮಾನವು ಅತಿ ವೇಗವಾಗಿ ಬಂದು ಮರಗಳಿಗೆ ಅಪ್ಪಳಿಸಿದ್ದು, ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ವೈಮಾನಿಕ ಚಿತ್ರಗಳಲ್ಲಿ ವಿಮಾನವು ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವುದು ಕಂಡುಬಂದಿದೆ.
ವಿಮಾನವು ಪತನಗೊಳ್ಳುವ ಮುನ್ನ ರೇಡಾರ್‌ನಿಂದ ಕಣ್ಮರೆಯಾಗಿತ್ತು ಮತ್ತು ವಿಮಾನದ ತುರ್ತು ಸೂಚಕ ಸಾಧನವು ಅಪಾಯದ ಸಂಕೇತಗಳನ್ನು (Distress Signals) ರವಾನಿಸಿತ್ತು ಎಂದು ವರದಿಯಾಗಿದೆ.








