ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಇರಾನ್ ವಿರುದ್ಧ ಅಮೆರಿಕ ಯಾವುದೇ ಹೊಸ ಮಿಲಿಟರಿ ಕ್ರಮ ಅಥವಾ ಸೇನಾ ದಾಳಿಗೆ ಮುಂದಾದರೆ, ಅದು ಇಡೀ ಜಗತ್ತಿನ ಮೇಲೆ “ಅತ್ಯಂತ ಹಾನಿಕಾರಕ ಪರಿಣಾಮಗಳನ್ನು” (Extremely damaging consequences) ಬೀರುತ್ತದೆ ಎಂದು ಪುಟಿನ್ ಗುಡುಗಿದ್ದಾರೆ.
ಇರಾನ್ ಅಮೆರಿಕದ ದಿಗ್ಬಂಧನದಿಂದ ಸಂಕಷ್ಟಕ್ಕೀಡಾಗಿರುವ ಸಮಯದಲ್ಲಿ, ರಷ್ಯಾ ತನ್ನ ಮಿತ್ರ ರಾಷ್ಟ್ರದ ಪರವಾಗಿ ನಿಂತಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಹಸ್ತಕ್ಷೇಪವು ಪ್ರಾದೇಶಿಕ ಭದ್ರತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ ಎಂದು ಪುಟಿನ್ ಪ್ರತಿಪಾದಿಸಿದ್ದಾರೆ.
ಪುಟಿನ್ ಅವರ ಈ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಾವು ಯಾರ ಬೆದರಿಕೆಗೂ ಮಣಿಯುವುದಿಲ್ಲ. ಇರಾನ್ ತನ್ನ ಪರಮಾಣು ಹಠವನ್ನು ಬಿಡದಿದ್ದರೆ ಅಮೆರಿಕ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಯಾವುದೇ ಹಂತಕ್ಕೆ ಹೋಗಲು ಸಿದ್ಧವಿದೆ” ಎಂದು ಸ್ಪಷ್ಟಪಡಿಸಿದ್ದಾರೆ.








