ನವದೆಹಲಿ: ಆಮ್ ಆದ್ಮಿ ಪಾರ್ಟಿಯ (AAP) ಪ್ರಭಾವಿ ನಾಯಕ ಹಾಗೂ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಅನಿರೀಕ್ಷಿತವಾಗಿ ಭಾರತೀಯ ಜನತಾ ಪಾರ್ಟಿ (BJP) ಸೇರಿರುವುದು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಜನಪ್ರಿಯತೆ ಕುಸಿದಿದ್ದು, ಕೇವಲ 24 ಗಂಟೆಗಳಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ‘ಅನ್‌ಫಾಲೋ’ ಮಾಡಿದ್ದಾರೆ.
ಯುವ ಮತದಾರರ ಮತ್ತು ‘ಜೆನ್ ಜಿ’ (Gen Z) ತಲೆಮಾರಿನ ನೆಚ್ಚಿನ ನಾಯಕನಾಗಿದ್ದ ರಾಘವ್ ಚಡ್ಡಾ ಅವರು ತಮ್ಮ ಸಿದ್ಧಾಂತಕ್ಕೆ ದ್ರೋಹ ಬಗೆದಿದ್ದಾರೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ #UnfollowRaghavChadha ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಶುಕ್ರವಾರವಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ 14.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಚಡ್ಡಾ ಅವರ ಸಂಖ್ಯೆ ಶನಿವಾರ ಮಧ್ಯಾಹ್ನದ ವೇಳೆಗೆ 13.5 ಮಿಲಿಯನ್‌ಗೆ ಇಳಿಕೆಯಾಗಿದೆ.
ಈ ಹಿಂದೆ ಬಿಜೆಪಿಯನ್ನು ತೀವ್ರವಾಗಿ ಟೀಕಿಸುತ್ತಿದ್ದ ರಾಘವ್ ಚಡ್ಡಾ ಅವರ ಹಳೆಯ ವಿಡಿಯೋಗಳು ಈಗ ವೈರಲ್ ಆಗುತ್ತಿವೆ. ಅಧಿಕಾರಕ್ಕಾಗಿ ಅವರು ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ ಎಂದು ಯುವಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೇವಲ ರಾಘವ್ ಚಡ್ಡಾ ಮಾತ್ರವಲ್ಲದೆ, ಆಪ್‌ನ ಇನ್ನೂ ಆರು ಮಂದಿ ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರ್ಪಡೆಯಾಗಿರುವುದು ಆಮ್ ಆದ್ಮಿ ಪಾರ್ಟಿಗೆ ದೊಡ್ಡ ಹೊಡೆತ ನೀಡಿದೆ.








