ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡುವಿನ ಸುದೀರ್ಘ ಯುದ್ಧದ ಕಾರಣದಿಂದ ಸ್ಥಗಿತಗೊಂಡಿದ್ದ ಇರಾನ್‌ನ ವಾಣಿಜ್ಯ ವಿಮಾನಯಾನ ಸೇವೆಗಳು ಇಂದಿನಿಂದ (ಶನಿವಾರ, ಏಪ್ರಿಲ್ 25) ಅಧಿಕೃತವಾಗಿ ಪುನಾರಂಭಗೊಂಡಿವೆ. ಸುಮಾರು ಎರಡು ತಿಂಗಳ ನಂತರ ಟೆಹ್ರಾನ್‌ನ ‘ಇಮಾಮ್ ಖೊಮೇನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ದಿಂದ ಮೊದಲ ಬಾರಿಗೆ ಅಂತರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸಿವೆ.
ಇರಾನ್‌ನ ಸರ್ಕಾರಿ ಸ್ವಾಮ್ಯದ ಟೆಲಿವಿಷನ್ ವರದಿ ಮಾಡಿರುವಂತೆ, ಟೆಹ್ರಾನ್‌ನಿಂದ ಟರ್ಕಿಯ ಇಸ್ತಾಂಬುಲ್, ಒಮನ್‌ನ ಮಸ್ಕತ್ ಮತ್ತು ಸೌದಿ ಅರೇಬಿಯಾದ ಮದೀನಾ ನಗರಗಳಿಗೆ ಮೊದಲ ವಿಮಾನಗಳು ಪ್ರಯಾಣ ಬೆಳೆಸಿವೆ.
ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಆರಂಭವಾದಾಗಿನಿಂದ ಇರಾನ್ ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿತ್ತು. ಈಗ ಕದನ ವಿರಾಮ ಘೋಷಣೆಯಾದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ವಿಮಾನಯಾನ ಆರಂಭಿಸಲಾಗುತ್ತಿದೆ.
ಕಳೆದ ವಾರವಷ್ಟೇ ಈಶಾನ್ಯ ಭಾಗದ ಮಶ್ಹದ್ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿತ್ತು. ಈಗ ರಾಜಧಾನಿ ಟೆಹ್ರಾನ್‌ನ ಮುಖ್ಯ ವಿಮಾನ ನಿಲ್ದಾಣವೂ ಕಾರ್ಯಾರಂಭ ಮಾಡಿರುವುದು ದೇಶದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವುದರ ಸಂಕೇತವಾಗಿದೆ.








