ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದ ಸಮೀಪವಿರುವ ಬಳಸಿದ ಪರಮಾಣು ಇಂಧನ (Spent Nuclear Fuel) ಸಂಗ್ರಹಣಾ ಕೇಂದ್ರದ ಮೇಲೆ ರಷ್ಯಾ ಪಡೆಗಳು ಉದ್ದೇಶಪೂರ್ವಕವಾಗಿ ದಾಳಿ ನಡೆಸಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾನುವಾರ ಆರೋಪಿಸಿದ್ದಾರೆ. ಈ ದಾಳಿಯನ್ನು ಅವರು “ಅತ್ಯಂತ ಹೇಯ ಕೃತ್ಯ” ಎಂದು ಕರೆದಿದ್ದು, ಅದೃಷ್ಟವಶಾತ್ ವಿಕಿರಣ ಮಟ್ಟದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯು (IAEA) ಉಕ್ರೇನ್‌ನಿಂದ ಮಾಹಿತಿ ಪಡೆದಿದ್ದು, “ದೊಡ್ಡ ಪ್ರಮಾಣದ ಪರಮಾಣು ವಸ್ತುಗಳನ್ನು” ಸಂಗ್ರಹಿಸಿರುವ ಸ್ಥಳದಿಂದ ಕೆಲವೇ ಮೀಟರ್‌ಗಳ ದೂರದಲ್ಲಿರುವ ಇಂಧನ ಸ್ವೀಕರಿಸುವ ಕಟ್ಟಡಕ್ಕೆ ದಾಳಿಯಿಂದ ಗಂಭೀರ ಹಾನಿಯಾಗಿದೆ ಎಂದು ತಿಳಿಸಿದೆ.
ಕೀವ್‌ನ ರಾಜ್ಯ ಪರಮಾಣು ಸಂಸ್ಥೆ ‘ಎನರ್ಗೋಆಟಮ್’ (Energoatom) ಮಾಹಿತಿ ನೀಡುವಂತೆ, ದಾಳಿ ನಡೆದ ಸಮಯದಲ್ಲಿ ಕಟ್ಟಡದಲ್ಲಿ ಯಾವುದೇ ಬಳಸಿದ ಇಂಧನವನ್ನು ಸಂಗ್ರಹಿಸಿರಲಿಲ್ಲ. ದಾಳಿಯಿಂದಾಗಿ ಸಂಭವಿಸಿದ್ದ ಬೆಂಕಿಯನ್ನು ನಂದಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ವಿಶ್ವದ ಅತ್ಯಂತ ಭೀಕರ ಪರಮಾಣು ದುರಂತಕ್ಕೆ ಸಾಕ್ಷಿಯಾದ ಚೆರ್ನೋಬಿಲ್ ಸ್ಥಾವರದಿಂದ ಸುಮಾರು 15 ಕಿ.ಮೀ (9 ಮೈಲು) ದೂರದಲ್ಲಿರುವ ಈ ಸೌಲಭ್ಯದ ಮೇಲೆ ನಡೆದ ದಾಳಿಯ ಬಗ್ಗೆ ರಷ್ಯಾ ಇದುವರೆಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
”ಅತ್ಯಂತ ನಿರ್ಣಾಯಕ ಮೂಲಸೌಕರ್ಯ ಸೌಲಭ್ಯದ ಮೇಲೆ ರಷ್ಯಾ ನಡೆಸಿದ ಅತ್ಯಂತ ಹೇಯ ದಾಳಿ ಇದಾಗಿದೆ” ಎಂದು ಝೆಲೆನ್ಸ್ಕಿ ‘X’ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ರಷ್ಯಾ ಈ ದಾಳಿಗೆ ‘ಶಹೀದ್’ (Shahed) ದಾಳಿ ಡ್ರೋನ್ ಅನ್ನು ಬಳಸಿದೆ ಎಂದು ಅವರು ತಿಳಿಸಿದ್ದಾರೆ. “ಪ್ರಸ್ತುತ, ವಿಕಿರಣ ಮಟ್ಟವು ಸಾಮಾನ್ಯ ಮಿತಿಗಿಂತ ಹೆಚ್ಚಾಗಿಲ್ಲ. ಆದರೆ ರಷ್ಯಾದ ದುರಹಂಕಾರವು ಖಂಡಿತವಾಗಿಯೂ ಹೆಚ್ಚಾಗಿದೆ, ಅದು ಬಹಳ ಹಿಂದೆಯೇ ಮಿತಿ ಮೀರಿದೆ” ಎಂದು ಅವರು ಕಿಡಿಕಾರಿದ್ದಾರೆ.
ಈ ಘಟನೆಯ ಪ್ರಭಾವವನ್ನು ಪರಿಶೀಲಿಸಲು ಶೀಘ್ರದಲ್ಲೇ ಒಂದು ತಂಡವು ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (IAEA) ಹೇಳಿಕೆಯಲ್ಲಿ ತಿಳಿಸಿದೆ.
ಫೆಬ್ರವರಿ 2025ರಲ್ಲಿ, ರಷ್ಯಾದ ಶಹೀದ್ ಡ್ರೋನ್ ಚೆರ್ನೋಬಿಲ್ ರಿಯಾಕ್ಟರ್‌ನ ಮೇಲಿದ್ದ ಕಂಟೈನ್‌ಮೆಂಟ್ ಆರ್ಚ್‌ಗೆ ಹಾನಿ ಮಾಡಿತ್ತು. 1986ರ ಏಪ್ರಿಲ್‌ನಲ್ಲಿ ಸಂಭವಿಸಿದ ಸ್ಫೋಟದ ನಂತರ ಈ ಆರ್ಚ್ ಅನ್ನು ನಿರ್ಮಿಸಲಾಗಿತ್ತು. ಉಕ್ರೇನ್ ನಗರಗಳು ಮತ್ತು ಮೂಲಸೌಕರ್ಯಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ನಿಯಮಿತವಾಗಿ ದಾಳಿ ನಡೆಸುತ್ತಿರುವ ರಷ್ಯಾ, ಆ ಸಂದರ್ಭದಲ್ಲಿ ತನ್ನ ಪಾತ್ರವನ್ನು ನಿರಾಕರಿಸಿತ್ತು.
ಉಕ್ರೇನ್ ಮತ್ತು ರಷ್ಯಾ ಎರಡೂ ದೇಶಗಳು, ರಷ್ಯಾದ ವಶದಲ್ಲಿರುವ ಆಗ್ನೇಯ ಉಕ್ರೇನ್‌ನ ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ‘ಝಪೊರಿಜ್ಜಿಯಾ’ ಮೇಲೆ ದಾಳಿ ಮಾಡುತ್ತಿರುವ ಆರೋಪವನ್ನು ಪರಸ್ಪರ ಹೊರಿಸುತ್ತಲೇ ಬಂದಿವೆ.








