ವಿಶ್ವದಾದ್ಯಂತ ಸುಮಾರು 4.3 ಕೋಟಿಗೂ ಹೆಚ್ಚು ಜನರು ದೃಷ್ಟಿಹೀನತೆಯಿಂದ ಬಳಲುತ್ತಿದ್ದಾರೆ. ಆದರೆ ಶೇ. 90 ಕ್ಕಿಂತ ಹೆಚ್ಚು ಕಣ್ಣಿನ ಸಮಸ್ಯೆಗಳನ್ನು ಮೊದಲೇ ಗುರುತಿಸಿದರೆ ತಡೆಯಬಹುದು ಎನ್ನುತ್ತಾರೆ ತಜ್ಞರು. ಆರ್ಬಿಸ್ (ಇಂಡಿಯಾ) ಸಂಸ್ಥೆಯ ಕಂಟ್ರಿ ಡೈರೆಕ್ಟರ್ ಆದ ಡಾ. ರಿಷಿ ರಾಜ್ ಬೋರಾ ಅವರ ಪ್ರಕಾರ, ಕಣ್ಣುಗಳು ನೀಡುವ ಈ 5 ಲಕ್ಷಣಗಳನ್ನು ನಾವು ಎಂದಿಗೂ ನಿರ್ಲಕ್ಷಿಸಬಾರದು:
1. ನಿರಂತರವಾಗಿ ದೃಷ್ಟಿ ಮಂಜಾಗುವುದು (Persistent Blurred Vision)
ದೀರ್ಘಕಾಲ ಸ್ಕ್ರೀನ್ ನೋಡಿದಾಗ ಕಣ್ಣು ಮಂಜಾಗುವುದು ಸಹಜ. ಆದರೆ, ನಿಮ್ಮ ದೃಷ್ಟಿ ಪದೇ ಪದೇ ಸ್ಪಷ್ಟ ಮತ್ತು ಮಂಜಾಗುವ ನಡುವೆ ಏರುಪೇರಾಗುತ್ತಿದ್ದರೆ, ಅದು ಕಣ್ಣಿನ ವರದೋಷ (Refractive errors) ಇರಬಹುದು. ಇದು ಆರಂಭಿಕ ಹಂತದ ಪೊರೆ (Cataract) ಅಥವಾ ಮಧುಮೇಹದ (Diabetes) ಕಾರಣದಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಬದಲಾಗುತ್ತಿರುವುದರ ಲಕ್ಷಣವೂ ಆಗಿರಬಹುದು. ಅದರಲ್ಲೂ ದಿಢೀರನೆ ಒಂದು ಕಣ್ಣು ಮಂಜಾದರೆ ತಕ್ಷಣ ವೈದ್ಯರನ್ನು ಕಾಣಬೇಕು.
2. ಕಣ್ಣಿನ ಆಯಾಸ ಮತ್ತು ತಲೆನೋವು (Eye Strain and Headaches)
ಓದುವಾಗ ಅಥವಾ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುವಾಗ ನಿಯಮಿತವಾಗಿ ತಲೆನೋವು ಅಥವಾ ಕಣ್ಣುಗಳಲ್ಲಿ ಅಸ್ವಸ್ಥತೆ ಕಾಣಿಸಿಕೊಂಡರೆ, ಅದು ಕಣ್ಣಿನ ದೃಷ್ಟಿ ದೋಷದ ಲಕ್ಷಣವಾಗಿದೆ. ಕಾಲಕ್ರಮೇಣ ಈ ಸಮಸ್ಯೆ ಮುಂದುವರಿದರೆ ಅದು ಒಣ ಕಣ್ಣಿನ ಕಾಯಿಲೆ (Dry eye diseases), ಕಣ್ಣಿನ ಸೋಂಕು ಅಥವಾ ಉರಿಯೂತವನ್ನು ಸೂಚಿಸುತ್ತದೆ.
3. ಕಣ್ಣು ಕೆಂಪಾಗುವುದು ಮತ್ತು ಕಿರಿಕಿರಿ (Redness and Irritation)
ಅನೇಕರು ಕಣ್ಣು ಕೆಂಪಾಗುವುದನ್ನು ಅಥವಾ ಕಣ್ಣಿನಿಂದ ನೀರು ಬರುವುದನ್ನು ಧೂಳು ಅಥವಾ ಅಲರ್ಜಿ ಎಂದು ನಿರ್ಲಕ್ಷಿಸುತ್ತಾರೆ. ಆದರೆ, ನಿರಂತರವಾಗಿ ಕಣ್ಣಿನಲ್ಲಿ ಕಿರಿಕಿರಿ ಉಂಟಾಗುತ್ತಿದ್ದರೆ ಅದು ‘ಡ್ರೈ ಐ ಸಿಂಡ್ರೋಮ್’ ಅಥವಾ ಕಣ್ಣಿನ ಒಳಗಿನ ಸೋಂಕಿನ ಲಕ್ಷಣವಾಗಿರಬಹುದು. ಇದನ್ನು ಹಾಗೆಯೇ ಬಿಟ್ಟರೆ ಕಣ್ಣಿನ ಮೇಲ್ಮೈಗೆ ಹಾನಿಯಾಗಬಹುದು.
4. ರಾತ್ರಿ ದೃಷ್ಟಿ ಮಂದವಾಗುವುದು ಮತ್ತು ಬೆಳಕಿಗೆ ಸೂಕ್ಷ್ಮತೆ (Night Vision Difficulty)
ರಾತ್ರಿಯ ಸಮಯದಲ್ಲಿ ಸರಿಯಾಗಿ ಕಾಣಿಸದಿರುವುದು ಅಥವಾ ವಾಹನಗಳ ಹೆಡ್ಲೈಟ್ ಬೆಳಕನ್ನು ನೋಡಲು ಕಷ್ಟವಾಗುವುದು (Light Sensitivity) ಆರಂಭಿಕ ಕಣ್ಣಿನ ಪೊರೆ ಅಥವಾ ರೆಟಿನಾದ ಬದಲಾವಣೆಗಳ ಸಂಕೇತವಾಗಿದೆ. ಇದು ನಿಧಾನವಾಗಿ ಹೆಚ್ಚಾಗುವುದರಿಂದ ವಾಹನ ಚಾಲನೆ ಮಾಡುವಾಗ ಅಪಾಯ ತಂದೊಡ್ಡಬಹುದು.
5. ಕಣ್ಣಿನ ಮುಂದೆ ಕಪ್ಪು ಚುಕ್ಕೆಗಳು ಮತ್ತು ಬೆಳಕಿನ ಮಿಂಚು (Floaters and Flashes)
ಕಣ್ಣಿನ ಮುಂದೆ ಆಗೊಮ್ಮೆ ಈಗೊಮ್ಮೆ ಕಪ್ಪು ಚುಕ್ಕೆಗಳು (Floaters) ತೇಲಾಡುವುದು ಸಾಮಾನ್ಯ. ಆದರೆ, ದಿಢೀರನೆ ಇಂತಹ ಚುಕ್ಕೆಗಳ ಸಂಖ್ಯೆ ಹೆಚ್ಚಾದರೆ, ಬೆಳಕಿನ ಮಿಂಚುಗಳು ಕಾಣಿಸಿಕೊಂಡರೆ ಅಥವಾ ದೃಷ್ಟಿಯಲ್ಲಿ ಕಪ್ಪು ನೆರಳು ಆವರಿಸಿದರೆ ಅದು ‘ರೆಟಿನಾ ಡಿಟ್ಯಾಚ್ಮೆಂಟ್’ (ಕಣ್ಣಿನ ಹಿಂಭಾಗದ ಪರದೆ ಜಾರುವುದು) ನಂತಹ ಗಂಭೀರ ಸಮಸ್ಯೆಯಾಗಿರಬಹುದು. ಇದನ್ನು ನಿರ್ಲಕ್ಷಿಸಿದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಅಪಾಯವಿರುತ್ತದೆ.
ಕಣ್ಣುಗಳಲ್ಲಿ ಸಮಸ್ಯೆ ಉಂಟಾದಾಗ ತಕ್ಷಣಕ್ಕೆ ಯಾವುದೇ ನೋವು ಕಾಣಿಸಿಕೊಳ್ಳುವುದಿಲ್ಲ, ಹಾಗಾಗಿಯೇ ಈ ‘ಮೌನ ಲಕ್ಷಣಗಳು’ ಹೆಚ್ಚು ಅಪಾಯಕಾರಿ. ವರ್ಷಕ್ಕೊಮ್ಮೆಯಾದರೂ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದರಿಂದ ಗ್ಲುಕೋಮಾ, ಮಧುಮೇಹದ ಕಣ್ಣಿನ ಕಾಯಿಲೆ ಹಾಗೂ ರಕ್ತದೊತ್ತಡದಂತಹ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು.