ಬೆಂಗಳೂರು: ದೇಶದ ರಾಜಕಾರಣದಲ್ಲಿ ಅಪರೂಪದ ಮುತ್ಸದ್ದಿ, ‘ಮಣ್ಣಿನ ಮಗ’ ಎಂದೇ ಖ್ಯಾತರಾದ ಹರದನಹಳ್ಳಿ ದೊಡ್ಡಗೌಡ ದೇವೇಗೌಡರು ಭಾರತದ 11ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 2026ರ ಜೂನ್ 1ಕ್ಕೆ (ಸೋಮವಾರ) ಸರಿಯಾಗಿ 30 ವರ್ಷಗಳು ಪೂರೈಸಿವೆ. ಹಾಸನ ಜಿಲ್ಲೆಯ ಹರದನಹಳ್ಳಿಯ ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಜನಿಸಿ, ಹಳ್ಳಿಗಾಡಿನ ರಾಜಕಾರಣದಿಂದ ದಿಲ್ಲಿಯ ಗದ್ದುಗೆಯವರೆಗೆ ಬೆಳೆದ ಅವರ ರಾಜಕೀಯ ಯಾನ ಭಾರತೀಯ ಪ್ರಜಾಪ್ರಭುತ್ವದ ವಿಶಿಷ್ಟ ಅಧ್ಯಾಯಗಳಲ್ಲಿ ಒಂದಾಗಿದೆ.
ರಾಷ್ಟ್ರ ರಾಜಕಾರಣದ ತೀವ್ರ ಅನಿಶ್ಚಿತತೆಯ ಕಾಲ: ಅದು 1996ರ ಲೋಕಸಭಾ ಚುನಾವಣೆಯ ಸಮಯ. ದೇಶದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ತೀವ್ರ ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿತ್ತು. ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ಎದುರಾಗಿತ್ತು. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಪರವಾಗಿ ಅಟಲ್ ಬಿಹಾರಿ ವಾಜಪೇಯಿ ಅವರು ಸರ್ಕಾರ ರಚಿಸಿದರಾದರೂ, ಬಹುಮತ ಸಾಬೀತುಪಡಿಸಲಾಗದೆ ಕೇವಲ 13 ದಿನಗಳಲ್ಲಿ ಆ ಸರ್ಕಾರ ಪತನಗೊಂಡಿತು. ದೇಶ ಮತ್ತೊಮ್ಮೆ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದ ಸಂದರ್ಭವದು.
ಅನಿರೀಕ್ಷಿತವಾಗಿ ಒಲಿದ ಪ್ರಧಾನಿ ಪಟ್ಟ: ವಾಜಪೇಯಿ ಸರ್ಕಾರ ಪತನಗೊಳ್ಳುತ್ತಿದ್ದಂತೆ, ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳು ಒಂದಾಗಿ ‘ಯುನೈಟೆಡ್ ಫ್ರಂಟ್’ (ಸಂಯುಕ್ತ ರಂಗ) ಮೈತ್ರಿಕೂಟವನ್ನು ರಚಿಸಿಕೊಂಡವು. ಈ ಮೈತ್ರಿಕೂಟಕ್ಕೆ ಅಂದಿನ ಕಾಂಗ್ರೆಸ್ ಪಕ್ಷವು ಹೊರಗಿನಿಂದ ಬೆಂಬಲ ನೀಡಲು ಮುಂದೆ ಬಂದಿತು. ಆಗ ದೇಶವನ್ನು ಮುನ್ನಡೆಸಬಲ್ಲ ಸರ್ವಾನುಮತದ ನಾಯಕ ಯಾರು ಎಂಬ ಚರ್ಚೆ ಆರಂಭವಾದಾಗ, ಎಲ್ಲರ ಕಣ್ಣು ಬಿದ್ದಿದ್ದು ಅಂದಿನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರ ಮೇಲೆ. ಪ್ರಾದೇಶಿಕ ನಾಯಕರ ಒಮ್ಮತದ ಅಭ್ಯರ್ಥಿಯಾಗಿ ದೇವೇಗೌಡರ ಹೆಸರು ಅಂತಿಮವಾಯಿತು.
ಸಿಎಂ ಸ್ಥಾನಕ್ಕೆ ರಾಜೀನಾಮೆ, ದಿಲ್ಲಿಗೆ ಪಯಣ: ಪ್ರಧಾನಿ ಪಟ್ಟ ಅನಿರೀಕ್ಷಿತವಾಗಿ ಒಲಿದುಬರುತ್ತಿದ್ದಂತೆ, ದೇವೇಗೌಡರು 1996ರ ಮೇ 30ರಂದು ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತದನಂತರ, ಜೂನ್ 1ರಂದು ಅವರು ಭಾರತದ 11ನೇ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆ ಮೂಲಕ ದಕ್ಷಿಣ ಭಾರತದಿಂದ, ಅದೂ ಕರ್ನಾಟಕದಿಂದ ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 1997ರ ಏಪ್ರಿಲ್ 21ರವರೆಗೆ (ಸುಮಾರು 10 ತಿಂಗಳು) ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.
94ರ ಹರೆಯದಲ್ಲೂ ಧೃತಿಗೆಡದ ಜನನಾಯಕ: ತಮ್ಮ ಅಲ್ಪಾವಧಿಯ ಪ್ರಧಾನಿ ಆಡಳಿತಾವಧಿಯಲ್ಲಿ ಈಶಾನ್ಯ ರಾಜ್ಯಗಳ ಅಭಿವೃದ್ಧಿ, ಕಾಶ್ಮೀರ ಸಮಸ್ಯೆ ನಿವಾರಣೆಗೆ ಶ್ರಮಿಸಿದ ಹಾಗೂ ದೆಹಲಿ ಮೆಟ್ರೋ ಯೋಜನೆಗೆ ಹಸಿರು ನಿಶಾನೆ ತೋರಿದ ಕೀರ್ತಿ ಗೌಡರಿಗೆ ಸಲ್ಲುತ್ತದೆ. ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರವೂ ಅವರು ರಾಜಕೀಯವಾಗಿ ಅನೇಕ ಏಳುಬೀಳುಗಳನ್ನು, ಸವಾಲುಗಳನ್ನು ಎದುರಿಸಿದ್ದಾರೆ. ಇಂದು 94ರ ಇಳಿವಯಸ್ಸಿನಲ್ಲೂ ಧೃತಿಗೆಡದೆ, ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವುದು ಅವರ ರಾಜಕೀಯ ಚಾಣಾಕ್ಷತೆ ಮತ್ತು ದಣಿವರಿಯದ ಜನಸೇವೆಯ ಮನೋಭಾವಕ್ಕೆ ಸಾಕ್ಷಿಯಾಗಿದೆ.








