ಶಿವಮೊಗ್ಗ : ಸತತವಾದ ಜಾಗೃತಿಯಿಂದ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ವ್ಯವಸ್ಥೆಯಲ್ಲಿನ ಲೋಪದೋಷಗಳು, ನ್ಯೂನತೆಗಳನ್ನು ತಿದ್ದುಪಡಿ ಮಾಡುತ್ತಾ ಈ ವ್ಯವಸ್ಥೆಯನ್ನು ಪವಿತ್ರವಾಗಿ ಉಳಿಸಿಕೊಂಡು ಹೋಗಬಹುದೆಂದು ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಂಸದೀಯ ವ್ಯವಹಾರಗಳ ಇಲಾಖೆ ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಸಂಸತ್-2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಇಂದಿಗೂ ಪ್ರಸ್ತುತವಾಗಿದೆ. ಸದನ ಸರ್ವೋಚ್ಚವಾಗಿದ್ದು ವ್ಯವಸ್ಥೆಯನ್ನು ಸುಧಾರಿಸುವ ಬಹಳ ದೊಡ್ಡ ಯಂತ್ರ ಇದಾಗಿದೆ.
12 ನೇ ಶತಮಾನದಲ್ಲಿ ಅನುಭವ ಮಂಟಪವೆಂಬ ಸಂಸತ್ನಲ್ಲಿ ನಮ್ಮ ಜಿಲ್ಲೆಯವರಾದ ಅಲ್ಲಮಪ್ರಭು ಮೊದಲ ಸಭಾಧ್ಯಕ್ಷರಾಗಿದ್ದರೆಂಬುದು ನಮ್ಮೆಲ್ಲರ ಹೆಮ್ಮೆ. ಹಾಗೂ ದೇಶದ ಮೊಟ್ಟ ಮೊದಲ ಪ್ರಜಾತಂತ್ರ ವ್ಯವಸ್ಥೆ ಸ್ಥಾಪನೆಯಾಗಿದ್ದು ಕರ್ನಾಟಕ ರಾಜ್ಯದಲ್ಲಿ. ಸ್ವಾತಂತ್ರ್ಯ ಪೂರ್ವದಲ್ಲೇ ಮೈಸೂರು ಒಡೆಯರ್ ಕಾಲದಲ್ಲಿ ದೇಶದಲ್ಲೇ ಪ್ರಥಮವಾಗಿ ಪ್ರಜಾ ಪ್ರತಿನಿಧಿ ಕಲ್ಪನೆ ಮೂಡಿದ್ದು ನಮ್ಮ ರಾಜ್ಯದಲ್ಲಿ ಎಂದರು.
ಲೋಕಸಭೆ, ರಾಜ್ಯ ಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ ನಾಲ್ಕೂ ಸದನಗಳಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸುವ ಸದವಕಾಶ ನನ್ನದಾಗಿದ್ದು ಮೂರು ಜನ ಪ್ರಧಾನ ಮಂತ್ರಿಗಳು ಮತ್ತು ಹಲವಾರು ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ ಅನುಭವ ಅನುಪಮವಾಗಿದೆ. ಎಲ್ಲ ಸ್ಥಾನಗಳೂ ವಿಭಿನ್ನವಾದ ಅನುಭವವನ್ನು ನೀಡಿದೆ ಎಂದು ಸ್ಮರಿಸಿದರು.
ವಿದ್ಯಾರ್ಥಿಗಳಿಗೆ, ಕೇಂದ್ರ ಮತ್ತು ರಾಜ್ಯದಲ್ಲಿ ನಡೆಯುವ ಸಂಸತ್ತಿನ ಕಲಾಪಗಳು, ಆಡಳಿತ ಪಕ್ಷ, ವಿರೋಧ ಪಕ್ಷ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲ, ಸಭಾಧ್ಯಕ್ಷ, ಮುಖ್ಯಮಂತ್ರಿ ಹೀಗೆ ಸರ್ಕಾರದ ಯಂತ್ರದ ಕುರಿತು ಹಾಗೂ ಶಿಷ್ಟಾಚಾರ ವ್ಯವಸ್ಥೆ, ಸಂಸತ್ತಿನ ಕಲಾಪದ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು.
ಯುವ ಸಂಸತ್ ಸ್ಪರ್ಧೆಯಲ್ಲಿ 35 ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಭಾಧ್ಯಕ್ಷರಾಗಿ ಪಿಳ್ಳಂಗಿರಿ ಸರ್ಕಾರಿ ಪ್ರೌಢಶಾಲೆಯ ಧೃವ, ಮುಖ್ಯಮಂತ್ರಿಯಾಗಿ ಸಾಗರ ತಾಲ್ಲೂಕು ತ್ಯಾಗರ್ತಿಯ ಸರ್ಕಾರಿ ಪ್ರೌಢಶಾಲೆಯ ವಸಂತ ಕೆ, ಗೃಹ ಸಚಿವರಾಗಿ ಹೊಸನಗರ ತಾಲ್ಲೂಕಿನ ಬೇಳೂರಿನ ಸರ್ಕಾರಿ ಪ್ರೌಢಶಾಲೆಯ ಹರ್ಷಿತ ಡಿ, ಶಿಕ್ಷಣ ಸಚಿವರಾಗಿ ಶಿಕಾರಿಪುರ ಸರ್ಕಾರಿ ಪ್ರೌಢಶಾಲೆಯ ಭುವನೇಶ್ವರಿ, ಆರೋಗ್ಯ ಸಚಿವರಾಗಿ ಭದ್ರಾವತಿ ನ್ಯೂಟೌನ್ ಸರ್ಕಾರಿ ಪ್ರೌಢಶಾಲೆಯ ಅರ್ಷಿಯಾ ಫಿರ್ದೋಶಿ ಎ, ಸಮಾಜ ಕಲ್ಯಾಣ ಸಚಿವರಾಗಿ ಚಿಟ್ಟೂರ್ನ ಸರ್ಕಾರಿ ಪ್ರೌಢಶಾಲೆಯ ಕವಿತಾ, ಕಾನೂನು/ಸಂಸದೀಯ ಸಚಿವರಾಗಿ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ದೀಕ್ಷಿತ್ ಎಸ್.ಎನ್ ಕಲಾಪದಲ್ಲಿ ಪಾಲ್ಗೊಂಡರೆ, ವಿರೋಧ ಪಕ್ಷದಲ್ಲಿ ಭದ್ರಾವತಿ ತಾಲ್ಲೂಕಿನ ಹೊಸ ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ಅಕ್ಷತ, ಹೊಸನಗರ ತಾಲ್ಲೂಕಿನ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯ ನಿಶ್ಮಿತಾ, ಸೊರಬ ತಾಲ್ಲೂಕಿನ ಉಳಿವಿಯ ಸರ್ಕಾರಿ ಪ್ರೌಢಶಾಲೆಯ ಸಿರಿ ಇತರರು ಪಾಲ್ಗೊಂಡಿದ್ದರು.
ಸಂಸತ್ತಿನ ಆರಂಭದಲ್ಲಿ ಸಂತಾಪ ಸೂಚನೆ ಕಲಾಪದಲ್ಲಿ ಸಚಿವರಾದ ಉಮೇಶ ಕತ್ತಿ ಮತ್ತು ನಟ ಪುನೀತ್ ರಾಜ್ಕುಮಾರ್ರವರಿಗೆ ಸಂತಾಪ ಸೂಚಿಸಲಾಯಿತು. ಪ್ರಶ್ನೋತ್ತರ ಕಲಾಪದಲ್ಲಿ ವಿರೋಧ ಪಕ್ಷದ ಸದಸ್ಯರು ಪೋಷಣ್ ಅಭಿಯಾನ 8 ಮತ್ತು 9ನೇ ತರಗತಿಗೆ ವಿಸ್ತರಣೆ ಕುರಿತು, ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಶಾಲಾ-ಕಾಲೇಜು, ವಸತಿ ಶಾಲೆಗಳ ವಿವರ ಸ್ಥಿತಿಗತಿ ಬಗ್ಗೆ ವಿವರಣೆ, ಮಳೆ ಹಾನಿ ಪರಿಹಾರ ಕ್ರಮಗಳು, ಸ್ಮಾರ್ಟ್ಸಿಟಿ ಯೋಜನೆಯಡಿ ಕಾಮಗಾರಿಗಳು, ಕೋಮು ಗಲಭೆ ನಿಯಂತ್ರಣ ಕ್ರಮಗಳು, ಹೈದರಾಬಾದ್ ಕರ್ನಾಟಕ ಹಸುರೀಕರಣಕ್ಕೆ ಕೈಗೊಂಡ ಕ್ರಮಗಳ ಕುರಿತಾದ ಪ್ರಶ್ನೆಗಳನ್ನು ಕೇಳಿದರು.
ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರು, ಶಾಸಕರು ಪ್ರಶ್ನೆಗಳಿಗೆ ಉತ್ತರ ನೀಡಿದರು. ಪ್ರಶ್ನೋತ್ತರ ಕಲಾಪದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು. ಸಭಾದ್ಯಕ್ಷರು ತಾಳ್ಮೆಯಿಂದ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಸದಸ್ಯರಿಗೆ ಸೂಚನೆ ನೀಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಡಯಟ್ ಪ್ರಾಂಶುಪಾಲರಾದ ಬಸವರಾಜಪ್ಪ, ಶಿಕ್ಷಣ ಇಲಾಖೆ ಅಧಿಕಾರಿ ಉಮಾ ಮಹೇಶ್, ಯುವ ಸಂಸತ್ ನೋಡಲ್ ಅಧಿಕಾರಿ ಶಿವನಗೌಡ, ಹಸನ್ ಸಾಬ್ ಇತರೆ ಶಿಕ್ಷಕರು ಹಾಜರಿದ್ದರು.