ನವದೆಹಲಿ:ದೇಶದ ರಾಜಧಾನಿ ದೆಹಲಿ ಸೇರಿದಂತೆ ಇಡೀ ಉತ್ತರ ಭಾರತದ ಜನತೆಗೆ ಮುಂದಿನ ವಾರ ಅತ್ಯಂತ ಕಠಿಣವಾಗಿರಲಿದೆ. ಮುಂದಿನ ಕೆಲವು ದಿನಗಳ ಕಾಲ ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಭೀಕರ ಬಿಸಿಗಾಳಿ (Heatwave) ಬೀಸಲಿದ್ದು, ತಾಪಮಾನವು ಬರೋಬ್ಬರಿ 45 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮೇ 18ರಿಂದಲೇ (ಸೋಮವಾರ) ದೆಹಲಿ ಮತ್ತು ಅದರ ನೆರೆಯ ರಾಜ್ಯಗಳಲ್ಲಿ ತಾಪಮಾನವು ತೀವ್ರವಾಗಿ ಏರಲಾರಂಭಿಸಲಿದೆ.ದೆಹಲಿಯಲ್ಲಿ ಗರಿಷ್ಠ ತಾಪಮಾನವು 43 ರಿಂದ 45 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುವ ಸಾಧ್ಯತೆಯಿದೆ.
ಹಗಲಿನ ವೇಳೆಯಲ್ಲಿ ಗಂಟೆಗೆ 20 ರಿಂದ 30 ಕಿಲೋಮೀಟರ್ ವೇಗದಲ್ಲಿ ತೀವ್ರವಾದ ಒಣ ಮತ್ತು ಬಿಸಿಗಾಳಿ (Loo) ಬೀಸಲಿದ್ದು, ಸಾರ್ವಜನಿಕರ ಸಂಚಾರ ದುಸ್ತರವಾಗಲಿದೆ.
ಹವಾಮಾನ ತಜ್ಞರ ಪ್ರಕಾರ, ಇಷ್ಟು ದಿನ ಬೀಸುತ್ತಿದ್ದ ತಂಪಾದ ಪೂರ್ವ ಮಾರುತಗಳು ಈಗ ನಿಂತುಹೋಗಿವೆ. ಅವುಗಳ ಜಾಗದಲ್ಲಿ ರಾಜಸ್ಥಾನ ಮತ್ತು ಮಧ್ಯ ಪಾಕಿಸ್ತಾನದ ಭಾಗದಿಂದ ಅತ್ಯಂತ ಒಣ ಹಾಗೂ ಬಿಸಿ ವಾಯುವ್ಯ ಮಾರುತಗಳು ಉತ್ತರ ಭಾರತದತ್ತ ಮುನ್ನುಗ್ಗುತ್ತಿವೆ. ಇದೇ ಕಾರಣಕ್ಕೆ ದಿಢೀರನೇ ತಾಪಮಾನದಲ್ಲಿ 3 ರಿಂದ 5 ಡಿಗ್ರಿಯಷ್ಟು ಭಾರೀ ಏರಿಕೆ ಕಂಡುಬರುತ್ತಿದೆ.
ಕೇವಲ ದೆಹಲಿ ಮಾತ್ರವಲ್ಲದೆ ಉತ್ತರ ಮತ್ತು ಮಧ್ಯ ಭಾರತದ ಪ್ರಮುಖ ರಾಜ್ಯಗಳಾದ ಪಂಜಾಬ್, ಹರಿಯಾಣ, ಚಂಡೀಗಢ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಮೇ 23 ರವರೆಗೆ ತೀವ್ರವಾದ ಬಿಸಿಗಾಳಿ ಇರಲಿದೆ ಎಂದು ಐಎಂಡಿ ತಿಳಿಸಿದೆ. ಅದರಲ್ಲೂ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ‘severe heatwave’ (ಅತ್ಯಂತ ಭೀಕರ ಬಿಸಿಗಾಳಿ) ಎಚ್ಚರಿಕೆ ನೀಡಲಾಗಿದೆ.








