ನವದೆಹಲಿ: 2020ರ ದೆಹಲಿ ಗಲಭೆ ಸಂಚಿನ ಪ್ರಕರಣದಲ್ಲಿ ಜೈಲು ಪಾಲಾಗಿರುವ ಉಮರ್ ಖಾಲಿದ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು (ಏಪ್ರಿಲ್ 20, 2026) ವಜಾಗೊಳಿಸಿದೆ. ಈ ಮೂಲಕ ಖಾಲಿದ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಮ್ಮೆ ಕಾನೂನು ಹಿನ್ನಡೆಯಾದಂತಾಗಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಈ ಆದೇಶ ನೀಡಿದೆ. “ನಾವು ಮರುಪರಿಶೀಲನಾ ಅರ್ಜಿ ಮತ್ತು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಜನವರಿ 5, 2026ರಂದು ನಾವು ನೀಡಿದ್ದ ಜಾಮೀನು ನಿರಾಕರಣೆಯ ತೀರ್ಪನ್ನು ಮರುಪರಿಶೀಲಿಸಲು ಯಾವುದೇ ಬಲವಾದ ಕಾರಣಗಳು ಕಂಡುಬಂದಿಲ್ಲ,” ಎಂದು ನ್ಯಾಯಾಲಯ ತಿಳಿಸಿದೆ.
ಅರ್ಜಿದಾರರ ಪರ ವಕೀಲರು ಮುಕ್ತ ನ್ಯಾಯಾಲಯದಲ್ಲಿ ಮೌಖಿಕ ವಿಚಾರಣೆ ನಡೆಸುವಂತೆ ಕೋರಿದ್ದರು. ಆದರೆ, ಸುಪ್ರೀಂ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿದೆ.
ಈ ವರ್ಷದ ಜನವರಿ 5ರಂದು ಸುಪ್ರೀಂ ಕೋರ್ಟ್ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಪ್ರಕರಣದಲ್ಲಿ ಇವರ ಪಾತ್ರದ ಬಗ್ಗೆ ಮೇಲ್ನೋಟಕ್ಕೆ ಸಾಕ್ಷ್ಯಗಳಿವೆ ಎಂದು ನ್ಯಾಯಾಲಯ ಆಗ ಅಭಿಪ್ರಾಯಪಟ್ಟಿತ್ತು.
2020ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ ಹಿಂದೆ ವ್ಯವಸ್ಥಿತ ಸಂಚು ರೂಪಿಸಿದ ಆರೋಪದ ಮೇಲೆ ಉಮರ್ ಖಾಲಿದ್ ಅವರನ್ನು 2020ರ ಸೆಪ್ಟೆಂಬರ್‌ನಲ್ಲಿ ಅರೆಸ್ಟ್ ಮಾಡಲಾಗಿತ್ತು. ಅವರ ವಿರುದ್ಧ ಯುಎಪಿಎ (UAPA) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ಐದು ವರ್ಷಗಳಿಂದ ಉಮರ್ ಖಾಲಿದ್ ಜೈಲಿನಲ್ಲಿದ್ದಾರೆ. ಹಲವು ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ, ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅವುಗಳನ್ನು ತಿರಸ್ಕರಿಸಿವೆ.








