ದೆಹಲಿಯ ಹೌಜ್ ರಾಣಿಯಲ್ಲಿರುವ ಅಕ್ರಮ ‘ಬೆಡ್-ಅಂಡ್-ಬ್ರೇಕ್‌ಫಾಸ್ಟ್’ (B&B) ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ವಿದೇಶಿ ಪ್ರಜೆ ಮೃತಪಟ್ಟಿದ್ದಾರೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟ ವಿದೇಶಿಯರ ಸಂಖ್ಯೆ 13ಕ್ಕೆ ಏರಿದೆ.
”ಸದರಿ ವಿದೇಶಿ ಪ್ರಜೆ ಶನಿವಾರ ತಡರಾತ್ರಿ ನಿಧನರಾದರು. ಈಗ ಸಾವಿನ ಸಂಖ್ಯೆ 22ಕ್ಕೆ ತಲುಪಿದೆ” ಎಂದು ದಕ್ಷಿಣ ದೆಹಲಿಯ ಉಪ ಪೊಲೀಸ್ ಆಯುಕ್ತ ಅನಂತ್ ಮಿತ್ತಲ್ ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡು ದಕ್ಷಿಣ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಇದಾಗಿದ್ದಾರೆ. ಗುರುತು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಮೃತಪಟ್ಟವರು ನೈಜೀರಿಯಾದ 39 ವರ್ಷದ ವ್ಯಕ್ತಿ.
ಬುಧವಾರ ಬೆಳಿಗ್ಗೆ 8:30ರ ಸುಮಾರಿಗೆ ‘ಫ್ಲೋರಿಶ್ ಸ್ಟೇ ಬಿ&ಬಿ’ (Flourish Stay B&B) ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಒಟ್ಟು 49 ಅತಿಥಿಗಳನ್ನು ರಕ್ಷಿಸಲಾಗಿತ್ತು. ಅವರಲ್ಲಿ 21 ಮಂದಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿಯೇ ಮೃತಪಟ್ಟಿದ್ದರು, 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಗಾಯಾಳುಗಳಲ್ಲಿ ಕನಿಷ್ಠ ಎಂಟು ಮಂದಿ ವೆಂಟಿಲೇಟರ್ ಬೆಂಬಲದಲ್ಲಿದ್ದರು. ರಕ್ಷಣಾ ಕಾರ್ಯಾಚರಣೆಯ ವೇಳೆ ಹತ್ತು ಮಂದಿ ಪೊಲೀಸರು ಕೂಡ ಗಾಯಗೊಂಡಿದ್ದರು.
ಭಾನುವಾರ ತನಿಖೆ ಮುಂದುವರೆದಿದ್ದು, ಶನಿವಾರ ಬಂಧಿಸಲಾದ 65 ವರ್ಷದ ಅಡುಗೆಯವ ಕೇಶವ್ ನೇಗಿಯನ್ನು ತನಿಖಾ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದರು. ತಾನು ಅಡುಗೆ ಮಾಡುತ್ತಿದ್ದಾಗ ಬೆಂಕಿ ಪ್ರಾರಂಭವಾಯಿತು ಎಂದು ನೇಗಿ ಹೇಳಿಕೊಂಡಿದ್ದರೂ, ಶನಿವಾರ ನ್ಯಾಯಾಲಯದಲ್ಲಿ ಆತನ ಪರ ವಕೀಲರು ಕಟ್ಟಡದ ಬೇರೆಡೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ವಾದಿಸಿದ್ದರು. ಆತ ಅಡುಗೆಮನೆ, ಸ್ವಾಗತ ಕೊಠಡಿ ಮತ್ತು ತಿನ್ನುವ ಪ್ರದೇಶಗಳನ್ನು ಅಧಿಕಾರಿಗಳಿಗೆ ತೋರಿಸಿದನು. ನೇಗಿಯನ್ನು ಉತ್ತರ ಪ್ರದೇಶದ ಘಾಜಿಯಾಬಾದ್‌ನಿಂದ ಬಂಧಿಸಲಾಗಿತ್ತು.
ನೇಗಿಯ ವಿಚಾರಣೆಯ ವೇಳೆ, ಅಂದು ಆತ ಒಬ್ಬನೇ ಇರಲಿಲ್ಲ, ಬದಲಿಗೆ ಮ್ಯಾನೇಜರ್ ರೂಪೇಶ್ ಸೇರಿದಂತೆ ಕನಿಷ್ಠ ಐವರು ಸಿಬ್ಬಂದಿ ಇದ್ದರು ಎಂಬುದು ತಿಳಿದುಬಂದಿದೆ. ಬೆಂಕಿ ಹೊತ್ತಿಕೊಂಡಾಗ ಅವರು ಸ್ಥಳದಿಂದ ಪರಾರಿಯಾಗಿದ್ದರು. ಪ್ರಮುಖ ಶಂಕಿತನಾಗಿರುವ ರೂಪೇಶ್ ತಲೆಮರೆಸಿಕೊಂಡಿದ್ದು, ಉಳಿದ ನಾಲ್ವರನ್ನು ವಿಚಾರಣೆ ನಡೆಸಲಾಗಿದೆ.
ಬಿ&ಬಿ ಮಾಲೀಕ ಜಯ ಮಿಶ್ರಾ ಕೂಡ ತಲೆಮರೆಸಿಕೊಂಡಿದ್ದಾರೆ. ಮಿಶ್ರಾ ಮತ್ತು ರೂಪೇಶ್ ಇಬ್ಬರ ವಿಚಾರಣೆ ಈ ಘಟನೆಯಲ್ಲಿನ ನಿಯಮಗಳ ಉಲ್ಲಂಘನೆ ಮತ್ತು ಅಪರಾಧವನ್ನು ಸ್ಥಾಪಿಸಲು ನಿರ್ಣಾಯಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ, ಗುರುಗ್ರಾಮ, ಘಾಜಿಯಾಬಾದ್, ನೋಯ್ಡಾ ಮತ್ತು ಬಿಹಾರ, ಉತ್ತರ ಪ್ರದೇಶ ಹಾಗೂ ಬಂಗಾಳದ ಹಲವು ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ವಿಚಾರಣೆ ನಡೆಸಲಾದ ಉಳಿದ ನಾಲ್ವರು ಸಿಬ್ಬಂದಿ, ಬೆಂಕಿಯನ್ನು ಕಂಡು ಭಯಭೀತರಾಗಿ ತಮ್ಮ ಪ್ರಾಣ ರಕ್ಷಣೆಗಾಗಿ ಸ್ಥಳದಿಂದ ಓಡಿಹೋಗಿದ್ದಾಗಿ ಹೇಳಿಕೊಂಡಿದ್ದಾರೆ. ಈವರೆಗೆ ಯಾರಿಗೂ ಕ್ಲೀನ್ ಚಿಟ್ ನೀಡಿಲ್ಲ. ಘಟನೆ ನಡೆದಾಗ ಮಿಶ್ರಾ ಸ್ಥಳದಲ್ಲಿ ಇರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಇದನ್ನು ತಾಂತ್ರಿಕ ತನಿಖೆಯ ಮೂಲಕ ಖಚಿತಪಡಿಸಿಕೊಳ್ಳಬೇಕಿದೆ. ಅಕ್ರಮ ಕಟ್ಟಡದ ಮಾಲೀಕ ಲವಕೇಶ್ ಬಜಾಜ್, ದೈನಂದಿನ ವ್ಯವಹಾರಗಳನ್ನು ಮಿಶ್ರಾ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಬಿ&ಬಿ ಯಲ್ಲಿನ ‘ಸ್ನ್ಯಾಕ್ಸ್ ಅಂಡ್ ಬೈಟ್ಸ್’ ರೆಸ್ಟೋರೆಂಟ್ 30 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಎಲ್ಲಾ ರೀತಿಯ ಅಡುಗೆ ಆಹಾರ ಮತ್ತು ಪಾನೀಯಗಳನ್ನು ಒದಗಿಸುತ್ತಿತ್ತು.








