ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆ ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿದೆ. ಈ ಪ್ರಮುಖ ಸಭೆಯಲ್ಲಿ ಶಾಸಕಾಂಗ ಪಕ್ಷದ ಅಧಿಕೃತ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಎಲ್ಲ ಶಾಸಕರು ಭಾಗವಹಿಸಲಿದ್ದಾರೆ. ಆದರೆ, ಇದೇ ಹೊತ್ತಿನಲ್ಲಿ ಹೈಕಮಾಂಡ್ಗೆ ಉಪಮುಖ್ಯಮಂತ್ರಿ (DCM) ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಗಾದಿಯ ಹಂಚಿಕೆ ಕುರಿತು ದೊಡ್ಡ ತಲೆನೋವು ಶುರುವಾಗಿದೆ.
ಆರಂಭದಲ್ಲಿ ಆಡಳಿತಾತ್ಮಕ ಮತ್ತು ಸಾಮಾಜಿಕ ಸಮೀಕರಣ ಸರಿದೂಗಿಸಲು ನಾಲ್ಕು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ವರಿಷ್ಠರು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಡಿಸಿಎಂ ರೇಸ್ಗೆ ಡಜನ್ಗಟ್ಟಲೆ ಹಿರಿಯ ನಾಯಕರು ಎಂಟ್ರಿ ಕೊಟ್ಟಿರುವುದು ಮತ್ತು ತಮಗೇ ಆ ಸ್ಥಾನ ಬೇಕೆಂದು ತೀವ್ರ ಲಾಬಿ ನಡೆಸುತ್ತಿರುವುದು. ಯಾರಿಗೆ ಅವಕಾಶ ನೀಡಿದರೂ ಮತ್ತೊಂದು ಬಣದಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಭೀತಿ ಹೈಕಮಾಂಡ್ ಅನ್ನು ಕಾಡುತ್ತಿದೆ.
ಕೋಮು ಮತ್ತು ಜಾತಿವಾರು ಸಮೀಕರಣದ ಪೈಪೋಟಿ: ವಿವಿಧ ಕೋಟಾಗಳ ಅಡಿಯಲ್ಲಿ ಡಿಸಿಎಂ ಸ್ಥಾನಕ್ಕಾಗಿ ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮುಸ್ಲಿಂ ಕೋಟಾದಡಿ ಜಮೀರ್ ಅಹ್ಮದ್ ಖಾನ್ ಮತ್ತು ಯು.ಟಿ. ಖಾದರ್ ನಡುವೆ ನೇರ ಹಣಾಹಣಿ ನಡೆದಿದೆ. ಜಮೀರ್ ಖಾನ್ ಬೆನ್ನಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಬೆಂಬಲವಿದ್ದರೆ, ಯು.ಟಿ. ಖಾದರ್ ಪರವಾಗಿ ಧಾರ್ಮಿಕ ಗುರುಗಳ ಶ್ರೀರಕ್ಷೆಯಿದೆ. ಇನ್ನು ದಲಿತ ಕೋಟಾದಲ್ಲಿ ಹಿರಿಯ ನಾಯಕ ಜಿ. ಪರಮೇಶ್ವರ್ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದೇ ವೇಳೆ ಒಬಿಸಿ ಕೋಟಾದಡಿ ಯತೀಂದ್ರ ಅವರ ಹೆಸರೂ ಮುಂಚೂಣಿಯಲ್ಲಿದ್ದರೂ, ಅವರಿಗೆ ಮಣೆ ಹಾಕಿದರೆ ಪಕ್ಷ ಹಾಗೂ ಸಾರ್ವಜನಿಕ ವಲಯದಲ್ಲಿ ಬೇರೆಯದೇ ಸಂದೇಶ ರವಾನೆಯಾಗಬಹುದು ಎಂಬ ಆತಂಕವೂ ವರಿಷ್ಠರಲ್ಲಿದೆ.
ಮತ್ತೊಂದೆಡೆ ಪ್ರಬಲ ಲಿಂಗಾಯತ ಸಮುದಾಯದ ಕೋಟಾದಡಿಯೂ ಪೈಪೋಟಿ ಕಮ್ಮಿಯಿಲ್ಲ. ಹಿರಿಯ ನಾಯಕರಾದ ಎಂ.ಬಿ. ಪಾಟೀಲ್ ಹಾಗೂ ಈಶ್ವರ ಖಂಡ್ರೆ ಮಧ್ಯೆ ಡಿಸಿಎಂ ರೇಸ್ ಜೋರಾಗಿದೆ. ಹೀಗೆ ಪ್ರತಿ ಸಮುದಾಯ ಮತ್ತು ಪ್ರಾದೇಶಿಕ ವಲಯದಿಂದಲೂ ಒತ್ತಡ ಹೆಚ್ಚುತ್ತಿರುವುದರಿಂದ, ಹೈಕಮಾಂಡ್ ನಾಯಕರು ಪ್ರತಿಯೊಂದು ಹೆಜ್ಜೆಯನ್ನೂ ಅಳೆದು ತೂಗಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಮತ್ತು ಮುಂಬರುವ ದಿನಗಳಲ್ಲಿ ಭಿನ್ನಮತ ಏಳದಂತೆ ತಡೆಯುವ ನಿಟ್ಟಿನಲ್ಲಿ ಸೂಕ್ತ ಹಾಗೂ ಸಮತೋಲಿತ ನಿರ್ಧಾರವನ್ನು ಪ್ರಕಟಿಸಲು ವರಿಷ್ಠರು ಸಜ್ಜಾಗಿದ್ದಾರೆ.








