ಬಳ್ಳಾರಿ: ನಿನ್ನೆ ಮುಖ್ಯಮಂತ್ರಿ ಬೊಮ್ಮಾಯಿಯವರು ( CM Bommai ) ಜನಸ್ಪಂದನ ಕಾರ್ಯಕ್ರಮದಲ್ಲಿ ಧಮ್ಮಿನ ವಿಚಾರ ಮಾತನಾಡಿದ್ದಾರೆ. ನಾನು ಅವರಿಗೆ ಅದೇ ಧಮ್ಮಿನಿಂದ ಹೇಳುತ್ತಿದ್ದೇನೆ, ಅವರ ಕೊನೆಯ ದಿನಗಳು ಆರಂಭವಾಗಿವೆ. ನಿಮ್ಮ ಧಮ್ಮು ಇಳಿಯುತ್ತದೆ, ನಮ್ಮ ಧಮ್ಮು ಏರುತ್ತದೆ. ಬೊಮ್ಮಾಯಿ ಅವರೇ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 150 ಕ್ಷೇತ್ರಗಳನ್ನು ಗೆಲ್ಲಲಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( DK Shivakumar ) ಹೇಳಿದ್ದಾರೆ.
ಇಂದು ಬಳ್ಳಾರಿಯಲ್ಲಿ ನಡೆದ ಭಾರತ ಜೋಡೋ ಯಾತ್ರೆ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಮಾತನಾಡಿದಂತ ಅವರು, ರಾಹುಲ್ ಗಾಂಧಿ ( Rahul Gandhi ) ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3510 ಕಿ.ಮೀ. ಪಾದಯಾತ್ರೆ ಮಾಡುತ್ತಿರುವುದನ್ನು ಕಂಡು ಬಿಜೆಪಿ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ರಾಹುಲ್ ಗಾಂಧಿಯವರು ಐದು ಪ್ರಮುಖ ವಿಚಾರವಾಗಿ ಈ ಪಾದಯಾತ್ರೆ ಮಾಡುತ್ತಿದ್ದಾರೆ. ದೇಶದಲ್ಲಿ ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಸಮಾಜವನ್ನು ಒಡೆಯಲಾಗುತ್ತಿದೆ. ಹೀಗಾಗಿ ಸಮಾಜದಲ್ಲಿ ಸಾಮರಸ್ಯ ಮೂಡಿಸಿ ದೇಶ ಹಾಗೂ ರಾಜ್ಯವನ್ನು ಒಂದುಗೂಡಿಸಲು ಈ ಪಾದಯಾತ್ರೆ ಮಾಡಲಾಗುತ್ತಿದೆ ಎಂದರು.
VIRAL NEWS: ಬೆಕ್ಕನ್ನು ಹುಲಿ ಮಾಡಿದ ಭೂಪ: ಮುಂದೆ ಪೋಲಿಸರಿಗೆ ಸಿಕ್ಕಿದ್ದೇ ರೋಚಕ
ದೇಶ ಹಾಗೂ ರಾಜ್ಯದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಯುವಕರಿಗೆ ಉದ್ಯೋಗ ಕಲ್ಪಿಸುವ ಕುರಿತು ಯೋಜನೆ ರೂಪಿಸಬೇಕಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ನಿನ್ನೆ ನಿರುದ್ಯೋಗಿ ಯುವಕರ ನೋಂದಣಿಗಾಗಿ ವೆಬ್ಸೈಟ್ ಅನ್ನು ಆರಂಭಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕೇರಿದ್ದು, ಜನರ ಆದಾಯ ಪಾತಾಳಕ್ಕೆ ಕುಸಿದಿದೆ. ಇದರಿಂದ ಬಡವರು, ಮಧ್ಯಮ ವರ್ಗದ ಜನಸಾಮಾನ್ಯರ ಜೇಬಿಗೆ ಪ್ರತಿನಿತ್ಯ ಕತ್ತರಿ ಹಾಕಲಾಗುತ್ತಿದೆ. ಅಕ್ಕಿ, ಮೊಸರು ಸೇರಿದಂತೆ ಎಲ್ಲಾ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಲಾಗಿದೆ. ಇದು ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗಿದೆ. ನಿಮ್ಮ ಆದಾಯ ಹೆಚ್ಚಾಗುವ ಬದಲು ವೆಚ್ಚ ಹೆಚ್ಚಾಗಿದೆ ಎಂದು ಹೇಳಿದರು.
ಬಿಜೆಪಿ ಆಡಳಿತದಲ್ಲಿ ಕರ್ನಾಟಕ ದೇಶದ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಈ ಸರ್ಕಾರ ಸ್ವಾಮೀಜಿಗಳಿಂದ 30%, ಗುತ್ತಿಗೆದಾರರಿಂದ 40%, ಮಹಾನಗರ ಪಾಲಿಕೆಯಲ್ಲಿ 50% ಕಮಿಷನ್ ಪಡೆಯುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದನ್ನು ತಡೆಯಬೇಕಿದೆ. ರಾಜ್ಯದ ರೈತರು ಹಾಗೂ ಕಾರ್ಮಿಕರ ಬದುಕನ್ನು ಹಸನು ಮಾಡಬೇಕಾಗಿದೆ. ರೈತರ ಬೆಳೆಗೆ ಬೆಂಬಲ ಬೆಲೆ ಸಿಗಬೇಕಿದೆ. ಹಾಲು ಉತ್ಪಾದಿಸುವ ರೈತರಿಗೂ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರು ಬಳಸುವ ರಸಗೊಬ್ಬರ, ಕೀಟನಾಶಕ, ಯಂತ್ರೋಪಕರಣಗಳ ಬೆಲೆ ಹೆಚ್ಚಾಗಿದೆ. ರಾಹುಲ್ ಗಾಂಧಿಯವರು ತಮಗೆ ಸಿಕ್ಕಿದ್ದ ಅಧಿಕಾರದ ಅವಕಾಶಗಳನ್ನು ತ್ಯಾಗ ಮಾಡಿ ಜನರಿಗಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದಾರೆ ಎಂದರು.
ಅವರು ರಾಜ್ಯದಲ್ಲಿ ಬೇರೆ ಮಾರ್ಗವಾಗಿ ಪಾದಯಾತ್ರೆ ಮಾಡಬಹುದಿತ್ತು. ಆದರೆ ನನ್ನ ತಾಯಿಗೆ ರಾಜಕೀಯವಾಗಿ ಜೀವ ಕೊಟ್ಟ ಬಳ್ಳಾರಿ ಕ್ಷೇತ್ರದಲ್ಲಿ ನಾನು ಪಾದಯಾತ್ರೆ ಮಾಡಬೇಕು ಎಂದು ಅವರು ತೀರ್ಮಾನಿಸಿದ್ದಾರೆ. ಸೋನಿಯಾ ಗಾಂಧಿಯವರು ಬಳ್ಳಾರಿಯಲ್ಲಿ ಗೆದ್ದ ನಂತರ, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಯೋಜನೆಗಳನ್ನು ಈ ಜಿಲ್ಲೆಗೆ ನೀಡಲಾಗಿದೆ. ಬಳ್ಳಾರಿ ಭಾಗದ ಜನರ ಜತೆ ಮಾತನಾಡಬೇಕು ಎಂದು ವಿಶೇಷವಾಗಿ ಒಂದು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಇದರ ಜವಾಬ್ದಾರಿಯನ್ನು ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆ ನಾಯಕರು ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಳ್ಳಾರಿಯ ಪಾಲಿಕೆ ಸದಸ್ಯರು ಭಾರತ ಜೋಡೋ ಯಾತ್ರೆ ಕುರಿತು ಭಿತ್ತಿಪತ್ರಗಳನ್ನು ಮನೆ, ಮನೆಗೆ ತಲುಪಿಸಬೇಕು. ಪ್ರತಿ ಹಳ್ಳಿಯಲ್ಲಿ ಎಲ್ಲರೂ ಪ್ರವಾಸ ಮಾಡಿ ಈ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಬೇಕು. ಈ ವಿಚಾರವಾಗಿ ಪಂಚಾಯತಿ ಮಟ್ಟದಲ್ಲಿ ಪೂರ್ವತಯಾರಿ ಸಭೆಗಳನ್ನು ನಡೆಸಬೇಕು. ಈ ಯಾತ್ರೆಗೆ ಹಣ ಕೊಟ್ಟು ಜನ ಕರೆದುಕೊಂಡು ಬರೋದು ಬೇಡ. ಪ್ರೀತಿ, ವಿಶ್ವಾಸ, ಅಭಿಮಾನದಿಂದ ದೇಶವನ್ನು ಒಗ್ಗೂಡಿಸಲು ಆಸಕ್ತಿ ಇರುವವರು ಈ ಯಾತ್ರೆಗೆ ಆಗಮಿಸಲಿ ಎಂದು ಹೇಳಿದರು.
ನಿನ್ನೆ ಬಿಜೆಪಿ ನಾಯಕನೊಬ್ಬ ರಾಹುಲ್ ಗಾಂಧಿ ಅವರದು ಐರನ್ ಲೆಗ್, ಹೋದ ಕಡೆಯಲ್ಲ ಕಾಂಗ್ರೆಸ್ ನಿರ್ನಾಮವಾಗುತ್ತದೆ ಎಂದು ಹೇಳುತ್ತಾನೆ. ಟೀ ಶರ್ಟ್ ಕುರಿತು ಮಾತನಾಡುತ್ತಾರೆ. ನಾವು ಕಬ್ಬಿಣವನ್ನು ಎರಡು ರೀತಿಯಲ್ಲಿ ಬಳಸಬಹುದು. ಬಿಜೆಪಿಯವರು ಈ ದೇಶವನ್ನು ಕತ್ತರಿಸುವ ಕತ್ತರಿಯಾದರೆ, ಕಾಂಗ್ರೆಸ್ ಪಕ್ಷ ಈ ದೇಶವನ್ನು ಒಗ್ಗೂಡಿಸುವ ಸೂಜಿಯಂತೆ ಕೆಲಸ ಮಾಡಲಿದೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ವಾಗ್ಧಾಳಿ ನಡೆಸಿದರು.
ಬಿಜೆಪಿಯವರು ನಾವು ಹಿಂದುಗಳು, ನಾವು ಮುಂದು ಎಂದು ಹೇಳುತ್ತಾರೆ. ಆದರೆ ನಾವು ಹಿಂದು, ಕ್ರೈಸ್ತರು, ಸಿಖ್ಖರು, ಪರಿಶಿಷ್ಟರು, ಬ್ರಹ್ಮಣರು, ವೀರಶೈವ ಲಿಂಗಾಯತರು, ಒಕ್ಕಲಿಗರು ಎಲ್ಲರೂ ಒಂದು ಎಂದು ಹೇಳುತ್ತೇವೆ. ನಿನ್ನೆ ಮುಖ್ಯಮಂತ್ರಿ ಬೊಮ್ಮಾಯಿಯವರು ಜನಸ್ಪಂದನ ಕಾರ್ಯಕ್ರಮದಲ್ಲಿ ಧಮ್ಮಿನ ವಿಚಾರ ಮಾತನಾಡಿದ್ದಾರೆ. ನಾನು ಅವರಿಗೆ ಅದೇ ಧಮ್ಮಿನಿಂದ ಹೇಳುತ್ತಿದ್ದೇನೆ, ಅವರ ಕೊನೆಯ ದಿನಗಳು ಆರಂಭವಾಗಿವೆ. ನಿಮ್ಮ ಧಮ್ಮು ಇಳಿಯುತ್ತದೆ, ನಮ್ಮ ಧಮ್ಮು ಏರುತ್ತದೆ. ಬೊಮ್ಮಾಯಿ ಅವರೇ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 150 ಕ್ಷೇತ್ರಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದರು.
ನಮ್ಮ ಎಲ್ಲ ಶಾಸಕರು ಪ್ರವಾಸ ಮಾಡುತ್ತಾರೆ. ಎಲ್ಲಾ ನಾಯಕರು ಜವಾಬ್ದಾರಿಯಿಂದ ಯಾತ್ರೆಯ ಸಿದ್ಧತೆಯನ್ನು ಮಾಡಬೇಕು. ನಿಮ್ಮ ಕ್ಷೇತ್ರಗಳಲ್ಲಿ ನೀವು ನಿಮ್ಮ ನಿಮ್ಮ ಫೋಟೋಗಳನ್ನು ಹಾಕಿಕೊಂಡು ಶಕ್ತಿ ಪ್ರದರ್ಶನ ತೋರಿಸಬೇಕು. ಪ್ರತಿ ಕ್ಷೇತ್ರದಲ್ಲಿ 25000 ಜನರನ್ನು ಸೇರಿಸಿ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಸ್ವಾತಂತ್ರ ನಡಿಗೆ ಕಾರ್ಯಕ್ರಮಕ್ಕೆ ಜನ ಅದರಲ್ಲಿ ಯುವಕರು ಹೇಗೆ ಸೇರಿದ್ದರು ಎಂಬುದನ್ನು ನೀವು ನೋಡಿದ್ದೀರಿ. ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮಕ್ಕೆ ಜನ ಸೇರಿದ್ದನ್ನು ನೀವು ನೋಡಿದ್ದೀರಿ. ಈ ಎರಡು ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ರಾಹುಲ್ ಗಾಂಧಿಯವರ ಕಾರ್ಯಕ್ರಮಕ್ಕೆ ಜನರು ಬರಬೇಕು. ಈ ಸಂಕಲ್ಪ ಮಾಡಬೇಕು ಎಂದರು.
ಚುನಾವಣೆಯಲ್ಲಿ ಗೆದ್ದಿರುವವರು ಹಾಗೂ ಸೋತಿರುವವರು ನಾಯಕರಾಗಿ ಬೆಳೆದಿದ್ದೀರಿ. ಕಾಂಗ್ರೆಸ್ ಪಕ್ಷದ ಹೊರತಾಗಿ ನೀವು ನಾವೆಲ್ಲರೂ ಶೂನ್ಯ. 21 ದಿನಗಳ ಕಾಲ ಪಾದಯಾತ್ರೆಯಲ್ಲಿ ನಡೆಯಲು ನಿಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಿ. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಇಬ್ಬರಿಂದ ಮೂವರಿಗೆ ಇದರ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.