ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕ್ಷೀಣಿಸುತ್ತಿರುವ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಶಾಲಾ ಶಿಕ್ಷಣ ಇಲಾಖೆಯು (ಧಾರವಾಡ ವಿಭಾಗ) ಬೃಹತ್ ಸಮಗ್ರ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿದೆ.
ಇಲಾಖೆಯ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, 2026-27ನೇ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿ ಪ್ರಕ್ರಿಯೆಯನ್ನು ಹಬ್ಬದಂತೆ ಆಚರಿಸಲು ಸೂಚಿಸಿದ್ದಾರೆ.
ಕ್ರಿಯಾಯೋಜನೆಯ ಪ್ರಮುಖ ಮುಖ್ಯಾಂಶಗಳು:
1. ಕಡಿಮೆ ದಾಖಲಾತಿ ಶಾಲೆಗಳ ಗುರುತಿಸುವಿಕೆ:
UDISE+ ದತ್ತಾಂಶದ ಆಧಾರದ ಮೇಲೆ ಕಡಿಮೆ ದಾಖಲಾತಿ ಇರುವ ಶಾಲೆಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಟ್ರ್ಯಾಕಿಂಗ್ ವ್ಯವಸ್ಥೆ ಮಾಡಲಾಗುವುದು.
2. ಸಮುದಾಯ ಆಧಾರಿತ ‘ಶಾಲೆ ಕಡೆಗೆ’ ಅಭಿಯಾನ:
ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ‘ಶಾಲೆ ಚಲೋ’ ಮತ್ತು ‘ಪ್ರವೇಶೋತ್ಸವ’ ಅಭಿಯಾನಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಎಸ್ಡಿಎಂಸಿ (SDMC), ಪಂಚಾಯತ್ ಹಾಗೂ ಅಂಗನವಾಡಿ ಸಿಬ್ಬಂದಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
3. ಗುಣಮಟ್ಟದ ಶಿಕ್ಷಣ ಮತ್ತು ಮೂಲಸೌಕರ್ಯ:
ಎಫ್.ಎಲ್.ಎನ್ (FLN): ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು.
ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಖಾತರಿಪಡಿಸಿ, ಮಕ್ಕಳಿಗೆ ಪೂರಕವಾದ ಸ್ನೇಹಿ ವಾತಾವರಣ ನಿರ್ಮಿಸುವುದು.
4. ವಿದ್ಯಾರ್ಥಿಗಳ ಆಕರ್ಷಣೆಗೆ ವಿಶೇಷ ಕ್ರಮಗಳು:
ಕೇವಲ ಪಾಠ ಮಾತ್ರವಲ್ಲದೆ ಕ್ರೀಡೆ, ಸಾಂಸ್ಕೃತಿಕ ಮತ್ತು ವಿಜ್ಞಾನ ಚಟುವಟಿಕೆಗಳಿಗೆ ಒತ್ತು ನೀಡಲಾಗುವುದು. ಶಾಲಾ ಗೋಡೆಗಳ ಮೇಲೆ ಆಕರ್ಷಕ ಚಿತ್ರಕಲೆ, ಜನ್ಮದಿನದ ಆಚರಣೆ, ಮತ್ತು ಶಾಲಾ ಸಮವಸ್ತ್ರ ದಿನಗಳನ್ನು ಆಚರಿಸುವ ಮೂಲಕ ಮಕ್ಕಳನ್ನು ಶಾಲೆಯತ್ತ ಸೆಳೆಯುವ ಗುರಿ ಹೊಂದಲಾಗಿದೆ.
5. ಶಾಲಾ ಬ್ರ್ಯಾಂಡಿಂಗ್:
ಖಾಸಗಿ ಶಾಲೆಗಳ ಮಾದರಿಯಲ್ಲೇ ಸರ್ಕಾರಿ ಶಾಲೆಗಳಿಗೂ ಪ್ರಚಾರ ನೀಡಲು ತೀರ್ಮಾನಿಸಲಾಗಿದೆ. ಶಾಲೆಯ ಸಾಧನೆಗಳನ್ನು ‘ರಿಸಲ್ಟ್ ಡಿಸ್ಪ್ಲೇ ಬೋರ್ಡ್’ ಮೂಲಕ ಪ್ರದರ್ಶಿಸುವುದು ಹಾಗೂ ಸೋಷಿಯಲ್ ಮೀಡಿಯಾ (WhatsApp ಗುಂಪುಗಳು) ಮೂಲಕ ಪೋಷಕರನ್ನು ತಲುಪಲು ಇಲಾಖೆ ನಿರ್ಧರಿಸಿದೆ.
ಜವಾಬ್ದಾರಿ ಹಂಚಿಕೆ:
ದಾಖಲಾತಿ ಹೆಚ್ಚಿಸುವ ಈ ಅಭಿಯಾನದಲ್ಲಿ ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರು (DDPI), ಬ್ಲಾಕ್ ಮಟ್ಟದಲ್ಲಿ ಬಿಇಒ (BEO) ಮತ್ತು ಶಾಲಾ ಮಟ್ಟದಲ್ಲಿ ಮುಖ್ಯ ಶಿಕ್ಷಕರು ನೇರ ಜವಾಬ್ದಾರರಾಗಿರುತ್ತಾರೆ. ಶಿಕ್ಷಕರನ್ನು ‘ದಾಖಲಾತಿ ರಾಯಭಾರಿಗಳನ್ನಾಗಿ’ ನೇಮಿಸಿ, ಮನೆ ಮನೆಗೆ ಭೇಟಿ ನೀಡಿ ಡ್ರಾಪ್-ಔಟ್ ಆದ ಮಕ್ಕಳನ್ನು ಮರಳಿ ಶಾಲೆಗೆ ತರುವ ‘ಬ್ರಿಡ್ಜ್ ಕೋರ್ಸ್’ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗಿದೆ.









