ಬೆಂಗಳೂರು : ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಸರ್ಕಾರಿ ಹುದ್ದೆ ಭರ್ತಿ ಜೊತೆಗೆ ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ, ಪಂಚಾಯಿತಿಗೆ ಒಂದರಂತೆ ರಾಜ್ಯದಲ್ಲಿ 10 ಸಾವಿರ ಯುವಕರ ಸಂಘ ಸ್ಥಾಪನೆ ಹಾಗೂ 10 ಲಕ್ಷ ಅನುದಾನ, ಒಸಿ ಸಿಸಿ ಸಮಸ್ಯೆಗೆ ಪರಿಹಾರ, ರಾಜ್ಯದೆಲ್ಲೆಡೆ ಬಿ ಖಾತಾಯಿಂದ ಎ ಖಾತಾ ಪರಿವರ್ತನೆ, ಬೆಂಗಳೂರು ನಗರದ ರಸ್ತೆಗಳ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ ಇವಿಷ್ಟು ಕರ್ನಾಟಕ ರಾಜ್ಯದಲ್ಲಿ ಯುವ ಯುಗ ಆರಂಭಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರ ಕೈಗೊಂಡಿರುವ ಷಟ್ಪದಿಗಳು.
ವಿಧಾನಸೌಧದಲ್ಲಿ ಬುಧವಾರ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ಮನೆ ಕಟ್ಟುವವರಿಗೆ ಬಂಪರ್ ಕೊಡುಗೆ: ಒಸಿ – ಸಿಸಿ ಸಮಸ್ಯೆಗೆ ಶಾಶ್ವತ ಪರಿಹಾರ
ಸ್ವಂತ ಮನೆ ಕಟ್ಟುವವರನ್ನು ದಶಕಗಳಿಂದ ಕಾಡುತ್ತಿದ್ದ ಅತಿ ದೊಡ್ಡ ಸಮಸ್ಯೆಯಾದ ಒಸಿ (Occupancy Certificate) ಮತ್ತು ಸಿಸಿ (Commencement Certificate) ಗೊಂದಲಕ್ಕೆ ನೂತನ ಸರ್ಕಾರ ಚಾಟಿ ಬೀಸಿದೆ.
ನಿಯಮ ಸಡಿಲಿಕೆ: 2,500 ಚದರ ಅಡಿವರೆಗಿನ ಮನೆಗಳಿಗೆ ನಿಗದಿಗಿಂತ ಶೇ. 20 ರಷ್ಟು ಹೆಚ್ಚುಕಮ್ಮಿ ವ್ಯತ್ಯಾಸವಿದ್ದರೂ, ಅದನ್ನು ಸಕ್ರಮಗೊಳಿಸಲು ಸರ್ಕಾರ ನಿರ್ಧರಿಸಿದೆ.
ಒನ್-ಟೈಮ್ ಸೆಟಲ್ಮೆಂಟ್: ಕಳೆದ ತಿಂಗಳು 31ರ ಒಳಗಾಗಿ ಅರ್ಜಿ ಸಲ್ಲಿಸಿ ಮನೆ ಕಟ್ಟಿರುವವರಿಗೆ ಈ ‘ಒನ್-ಟೈಮ್’ ಸುವರ್ಣ ಅವಕಾಶ ಸಿಗಲಿದೆ.
“ಮನೆ ಕಟ್ಟುವ ನಾಗರಿಕರಿಗೆ ಕುಡಿಯುವ ನೀರು ಒದಗಿಸುವುದು ನಮ್ಮ ಆದ್ಯ ಕರ್ತವ್ಯ” ಎಂದು ಸಿಎಂ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಗ್ರೀನ್ ಸಿಗ್ನಲ್
ಬೆಂಗಳೂರು ಸೇರಿದಂತೆ ರಾಜ್ಯದ ಲಕ್ಷಾಂತರ ಆಸ್ತಿ ಮಾಲೀಕರಿಗೆ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯಾದ್ಯಂತ ಇರುವ ಎಲ್ಲಾ ‘ಬಿ-ಖಾತಾ’ ಆಸ್ತಿಗಳನ್ನು ‘ಎ-ಖಾತಾ’ ಆಗಿ ಪರಿವರ್ತಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದಾಗಿ ಆಸ್ತಿ ಮಾಲೀಕರ ವರ್ಷಗಳ ಆತಂಕ ದೂರಾಗಲಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ದೊಡ್ಡ ಬೂಸ್ಟರ್ ಸಿಕ್ಕಂತಾಗಿದೆ.
ರಾಜ್ಯದಲ್ಲಿ ‘ಯುವ ಯುಗ’ ಆರಂಭ: ಸರ್ಕಾರದ 6 ಪ್ರಮುಖ ಘೋಷಣೆಗಳು
ಕಳೆದ ಆರು ತಿಂಗಳಿಂದ ನಡೆಸಿದ ಸಿದ್ಧತೆಯ ಫಲವಾಗಿ 6 ಪ್ರಮುಖ ವರ್ಗಗಳ ಜನರನ್ನು ತಲುಪಲು ಸರ್ಕಾರ ಈ ಕೆಳಗಿನ ನಿರ್ಧಾರಗಳನ್ನು ಕೈಗೊಂಡಿದೆ:
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ.
ಉದ್ಯೋಗ ಕ್ರಾಂತಿ: ಖಾಲಿ ಇರುವ ಸರ್ಕಾರಿ ಹುದ್ದೆಗಳ ಶೀಘ್ರ ಭರ್ತಿ ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಕ್ಕಾಗಿ ವಿಶೇಷ ‘ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ’ ಜಾರಿ.
ಯುವಕರ ಸಂಘ ಹಾಗೂ ಅನುದಾನ: ರಾಜ್ಯದ ಪ್ರತಿಯೊಂದು ಪಂಚಾಯಿತಿಗೆ ಒಂದರಂತೆ 10 ಸಾವಿರ ಯುವಕರ ಸಂಘಗಳ ಸ್ಥಾಪನೆ. ಈ ಸಂಘಗಳಿಗೆ ತಲಾ 10 ಲಕ್ಷ ರೂ. ಅಭಿವೃದ್ಧಿ ಅನುದಾನ.
ಒಸಿ-ಸಿಸಿ ಗೊಂದಲ ನಿವಾರಣೆ: ಮನೆ ಕಟ್ಟುವ ಸಾಮಾನ್ಯ ಜನರಿಗೆ ನಿರಾಳತೆ.
ಬಿ-ಖಾತಾ ಟು ಎ-ಖಾತಾ: ರಾಜ್ಯಾದ್ಯಂತ ಆಸ್ತಿಗಳ ಎ-ಖಾತಾ ಸಕ್ರಮ ಪ್ರಕ್ರಿಯೆಗೆ ಚಾಲನೆ.
ಬೆಂಗಳೂರು ರಸ್ತೆಗಳಿಗೆ ₹2,000 ಕೋಟಿ: ರಾಜಧಾನಿ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಹಾಗೂ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು 2 ಸಾವಿರ ಕೋಟಿ ರೂಪಾಯಿ ವಿಶೇಷ ಅನುದಾನ.








