ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದಿಂದ ನಂದಿನಿ ಹಾಲು ದರವನ್ನು ರೂ.3 ಹೆಚ್ಚಳ ಮಾಡೋದಾಗಿ ಘೋಷಣೆ ಮಾಡಿತ್ತು. ಆದ್ರೇ ಸಿಎಂ ಬಸವರಾಜ ಬೊಮ್ಮಾಯಿ ಇದಕ್ಕೆ ಬ್ರೇಕ್ ಹಾಕಿದ್ದರು. ಈ ಬೆನ್ನಲ್ಲೇ, ನಂದಿನಿ ಉತ್ಪನ್ನಗಳ ದರ ಪರಿಷ್ಕರಣೆ ಸಂಬಂಧ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗುತ್ತಿದೆ. ಇಂದಿನ ಸಭೆಯ ಬಳಿಕ ಹಾಲಿನ ದರ ಹೆಚ್ಚಳವೋ, ಇಲ್ಲವೋ ಎನ್ನುವಂತ ಮಾಹಿತಿ ಹೊರ ಬೀಳಲಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಸಂಬಂಧ ಮಹತ್ವದ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಎಂಡಿ ಸತೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.
ಇದೀಗ ನಡೆಯುತ್ತಿರುವಂತ ಸಿಎಂ ನೇತೃತ್ವದ ಕೆಎಂಎಫ್ ಅಧ್ಯಕ್ಷರ ಸಭೆಯಲ್ಲಿ, ನಂದಿನ ಹಾಲಿನ ದರ ಹೆಚ್ಚಳ ಸಂಬಂಧ ಮಹತ್ವದ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ನಂದಿನಿ ಉತ್ಪನ್ನಗಳ ದರಗಳನ್ನು ಹೆಚ್ಚಿಸಬೇಕೋ ಅಥವಾ ಬೇಡವೇ ಎನ್ನುವ ಬಗ್ಗೆಯೂ ಚರ್ಚೆ ನಡೆಯಲಿದೆ.
ಸಿಎಂ ನೇತೃತ್ವದ ಈ ಸಭೆಯ ಬಳಿಕ, ರಾಜ್ಯದಲ್ಲಿ ನಂದಿನಿ ಹಾಲು, ಮೊಸರಿನ ದರ ಹೆಚ್ಚಳದ ಬಗ್ಗೆ ಅಧಿಕೃತವಾದಂತ ಮಾಹಿತಿ ಹೊರ ಬೀಳಲಿದೆ. ಅದು ಅಗತ್ಯವಸ್ತುಗಳ ಬೆಲೆ ಹೆಚ್ಚಳದಿಂದ ತತ್ತರಿಸೋ ಜನತೆಗೆ ಶಾಕ್ ಆದರೂ ಆಗಿರಬಹುದು, ಇಲ್ಲವೇ ದರ ಹೆಚ್ಚಳಕ್ಕೆ ಬ್ರೇಕ್ ಹಾಕುವಂತ ನಿರ್ಧಾರವಾದರೂ ಆಗಿರಬಹುದು. ಆ ಬಗ್ಗೆ ಕೆಲವೇ ಕ್ಷಣಗಳಲ್ಲಿ ಮಾಹಿತಿ ಹೊರ ಬೀಳಲಿದೆ.