ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುವಾಗ ಕರ್ನಾಟಕ ಹೈಕೋರ್ಟ್ ಕಾನೂನು ಮತ್ತು ಶಿಕ್ಷೆಯ ಕುರಿತು ಕಠಿಣ ಅವಲೋಕನಗಳನ್ನು ಮಾಡಿದೆ. ಅಪರಾಧಿಗಳನ್ನು ಕಾನೂನಿನ ಅಡಿಯಲ್ಲಿ ದೃಢವಾಗಿ ಶಿಕ್ಷಿಸುತ್ತಿಲ್ಲವಾದ್ದರಿಂದ ಅಪರಾಧ ಕೃತ್ಯಗಳನ್ನು ಎಸಗುವುದು ಸುಲಭವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ವಿದ್ಯಾರ್ಥಿ ಗೋಪಿ ರೆಡ್ಡಿ ಕಾರ್ತಿಕ್ ರೆಡ್ಡಿ ಎಂಬುವವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಪೀಠವು ವಿಚಾರಣೆ ನಡೆಸಿತು. ಆರೋಪಿಯು ಅತ್ಯಾಚಾರ ಪ್ರಕರಣವೊಂದರಲ್ಲಿ ಏಪ್ರಿಲ್ 5ರಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ.
ವಿಚಾರಣೆ ವೇಳೆ, ಅಪರಾಧಿಗಳು ಶಿಕ್ಷೆಯ ಬಗ್ಗೆ ಭಯವಿಲ್ಲದೆ ಸಾಧಾರಣವಾಗಿ ಅಪರಾಧಗಳನ್ನು ಎಸಗುತ್ತಿರುವುದು ಹೆಚ್ಚಾಗಿದೆ ಎಂದು ನ್ಯಾಯಮೂರ್ತಿ ನಟರಾಜ್ ಕಳವಳ ವ್ಯಕ್ತಪಡಿಸಿದರು.
”ನಾವು ಅಪರಾಧಿಗಳನ್ನು ದೃಢವಾಗಿ ಶಿಕ್ಷಿಸುವುದಿಲ್ಲ, ಅದಕ್ಕಾಗಿಯೇ ಕಾನೂನು ತನ್ನ ಶಕ್ತಿಯನ್ನು ಕಳೆದುಕೊಂಡಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಇರುವಂತೆ ಇಲ್ಲಿ ಅಪರಾಧ ಮಾಡುವುದು ಅಷ್ಟು ಸುಲಭವಲ್ಲ. ನೀವು ಅವರ ಕೈ ಅಥವಾ ಕಾಲುಗಳನ್ನು ಕತ್ತರಿಸಿದರೆ ಮಾತ್ರ ಜನರು ಕಾನೂನನ್ನು ಪಾಲಿಸಲು ಮುಂದಾಗಬಹುದು. ನಮಗೆ ಪ್ರಜಾಪ್ರಭುತ್ವ ಇರುವುದರಿಂದ, ಪ್ರತಿಯೊಬ್ಬರೂ ಕಾನೂನನ್ನು ಲಘುವಾಗಿ (for granted) ಪರಿಗಣಿಸುತ್ತಾರೆ” ಎಂದು ನ್ಯಾಯಾಲಯವು ಮಾರ್ಮಿಕವಾಗಿ ನುಡಿಯಿತು. ಮಧ್ಯಪ್ರಾಚ್ಯ ದೇಶಗಳಲ್ಲಿ ವಿಧಿಸುವಂತಹ ಕಠಿಣ ಶಿಕ್ಷೆಗಳು ಜನರನ್ನು ಕಾನೂನುಬದ್ಧವಾಗಿರುವಂತೆ ಮಾಡಬಲ್ಲವು ಎಂದು ನ್ಯಾಯಾಧೀಶರು ಸೂಚಿಸಿದರು.
ಜಾಮೀನು ಅರ್ಜಿ ತಿರಸ್ಕಾರ:
ಸುಮಾರು ಎರಡು ತಿಂಗಳಿಂದ ಜೈಲಿನಲ್ಲಿರುವ ರೆಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸದ್ಯಕ್ಕೆ ತಿರಸ್ಕರಿಸಿದ ನ್ಯಾಯಮೂರ್ತಿ ನಟರಾಜ್, “ನೀವು ಉಪ್ಪು ತಿಂದಿದ್ದರೆ, ನೀರು ಕುಡಿಯಲೇಬೇಕು (ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು). ಅವನನ್ನು ಇನ್ನೂ ನಾಲ್ಕೈದು ದಿನ ಜೈಲಿನಲ್ಲಿ ಇರಲಿ ಬಿಡಿ. ಅವನಿಗೆ ಜೈಲಿನ ಪರಿಸ್ಥಿತಿಯ ಅಭ್ಯಾಸವಾಗಲಿ. ಶಿಕ್ಷೆಯಾದರೆ ಮತ್ತೆ ಹೋಗಬೇಕಾಗಬಹುದು” ಎಂದು ಕಠಿಣವಾಗಿ ನುಡಿದರು. ಆದಾಗ್ಯೂ, ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 8ಕ್ಕೆ ನಿಗದಿಪಡಿಸಿದೆ.
ಆರೋಪಿಯ ವಾದ:
ಆರೋಪಿಯ ಪರ ವಕೀಲ ಅಯಂತಿಕಾ ಮೊಂಡಲ್ ವಾದಿಸಿ, ಆರೋಪಿಯು ಈಗಾಗಲೇ ಸುಮಾರು ಎರಡು ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದಾನೆ ಮತ್ತು ಯಾವುದೇ ಅಪರಾಧ ಎಸಗಿಲ್ಲ ಎಂದು ತಿಳಿಸಿದರು. ಈ ಪ್ರಕರಣವು ಸುಮಾರು ಮೂರು ವರ್ಷಗಳಷ್ಟು ಹಳೆಯದಾಗಿದೆ ಎಂದು ವಾದಿಸಿದ ಅವರು, ಸುದೀರ್ಘ ಬಂಧನವು ವಿದ್ಯಾರ್ಥಿಯ ವೃತ್ತಿಪರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದರು.








