ಚಿಕ್ಕಬಳ್ಳಾಪುರ : ಬಯಲುಸೀಮೆಯ ಭಾಗ, ಐತಿಹಾಸಿಕ ತಾಣಗಳ ಕೇಂದ್ರವಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶನಿವಾರ, ಚಿಕ್ಕಬಳ್ಳಾಪುರ ಉತ್ಸವಕ್ಕೆ ಅದ್ದೂರಿಯ ಚಾಲನೆ ದೊರೆಯಿತು. ಕಲೆ, ಕ್ರೀಡೆ, ಆಹಾರ, ಉದ್ಯೋಗಾವಕಾಶ, ಆರೋಗ್ಯ ಮೇಳ ಮೊದಲಾದವುಗಳನ್ನೊಳಗೊಂಡ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಹಾಗೆಯೇ, ಚಿಕ್ಕಬಳ್ಳಾಪುರದ ಪುಣ್ಯಭೂಮಿಯು ಜನರ ಬದುಕಿನ ಭವಿಷ್ಯವನ್ನು ಬರೆಯಲು ʼಚಿಕ್ಕಬಳ್ಳಾಪುರ ಉತ್ಸವʼವು ಮುನ್ನುಡಿಯಾಗಲಿದೆ ಎಂದು ಮುಖ್ಯಮಂತ್ರಿಗಳು ಹಾರೈಸಿದರು.
ಜನವರಿ 7 ರಿಂದ 14 ವರೆಗೆ ಚಿಕ್ಕಬಳ್ಳಾಪುರ ಉತ್ಸವ ನಡೆಯಲಿದೆ. ಈ ವಿಜೃಂಭಣೆಯ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಚಿಕ್ಕಬಳ್ಳಾಪುರದ ಪುಣ್ಯಭೂಮಿಯು ಜನರ ಬದುಕಿನ ಭವಿಷ್ಯವನ್ನು ಬರೆಯಲು ʼಚಿಕ್ಕಬಳ್ಳಾಪುರ ಉತ್ಸವʼವು ಮುನ್ನುಡಿಯಾಗಲಿದೆ. ಪ್ರಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ, ವಿಜ್ಞಾನದಲ್ಲಿ ಸಾಧನೆ ಮಾಡಿದ ಸಿಎನ್ಆರ್ ರಾವ್ ಇಲ್ಲಿಯವರೇ ಆಗಿದ್ದಾರೆ. ಹೀಗೆ ಇಬ್ಬರು ಭಾರತರತ್ನಗಳನ್ನು ಈ ಜಿಲ್ಲೆ ನೀಡಿದೆ. ಇತಿಹಾಸ ಪ್ರಸಿದ್ಧ ಭೋಗನಂದೀಶ್ವರ ದೇವಸ್ಥಾನ ಇಲ್ಲೇ ಇದೆ. ಇಂತಹ ವಿಶಿಷ್ಟ ಜಿಲ್ಲೆಯನ್ನು ಈಗ ಫಲ ಪುಷ್ಪ ಗಿರಿಧಾಮ ನಾಡು ಎಂದು ಕರೆಯಲಾಗಿದೆ. ಈ ಹೆಸರನ್ನು ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತಗೊಳಿಸಲಾಗುವುದು ಎಂದು ತಿಳಿಸಿದರು.
ಡಾ.ಕೆ.ಸುಧಾಕರ್ ಅವರು ಆರೋಗ್ಯ ಸಚಿವರಾಗಿ ಕೋವಿಡ್ ನಿರ್ವಹಣೆಯನ್ನು ದೇಶಕ್ಕೇ ಮಾದರಿ ಎಂಬಂತೆ ಮಾಡಿದ್ದಾರೆ. ಇದರ ಸಂಪೂರ್ಣ ಶ್ರೇಯಸ್ಸು, ಸಚಿವರಿಗೆ, ಆರೋಗ್ಯ ಸಿಬ್ಬಂದಿಗೆ ಸಲ್ಲಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಭಗವಂತ ಆಶೀರ್ವಾದ ಮಾಡುತ್ತಾನೆ. ಅದರಂತೆ, ಸುಧಾಕರ್ ಅವರು ರಾಜ್ಯದ ಸೇವೆ ಮಾಡಿದ ಬಳಿಕ ಬರಡು ಭೂಮಿಯಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಉತ್ತಮ ಮಳೆಯಾಗಿದೆ. ಇಲ್ಲಿ ಬೆಳೆಯುವ ತರಕಾರಿ, ರೇಷ್ಮೆ, ಹಾಲು ಉತ್ಕೃಷ್ಟವಾಗಿದೆ. ನಮ್ಮ ಮನೆಯಲ್ಲೂ ಚಿಕ್ಕಬಳ್ಳಾಪುರದ ತರಕಾರಿ ಬಳಸುತ್ತೇವೆ ಎಂದರು.
ನವ ಭಾರತ ನಿರ್ಮಾಣಕ್ಕೆ ಕೊಡುಗೆ
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಜಿಲ್ಲೆಯಾಗಿ 15 ವಸಂತಗಳ ಸಂಭ್ರಮದಲ್ಲಿರುವ ಚಿಕ್ಕಬಳ್ಳಾಪುರ ಧಾರ್ಮಿಕ, ಐತಿಹಾಸಿಕ, ಶೈಕ್ಷಣಿಕ ಹಾಗೂ ಎಲ್ಲಾ ಮೂಲಸೌಕರ್ಯಗಳನ್ನು ಪಡೆದು ನವ ಕರ್ನಾಟಕದ ನಿರ್ಮಾಣದಲ್ಲಿ ಅತಿ ದೊಡ್ಡ ಬೆಳವಣಿಗೆ ಕಂಡು, ನವ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ.
ಈ ಐತಿಹಾಸಿಕ ದಿನವನ್ನು ಇಡೀ ಜಿಲ್ಲೆಯ ಜನರು ಆಚರಿಸಿಕೊಳ್ಳುತ್ತಿದ್ದಾರೆ. ಇಡೀ ರಾಜ್ಯವೇ ನಮ್ಮ ಕಡೆ ನೋಡುತ್ತಿದೆ. ಈ ಅದ್ದೂರಿಯ ಹಬ್ಬ ಜಿಲ್ಲೆಯ ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಸೇವೆ, ನೀರಾವರಿ ಅಭಿವೃದ್ಧಿಯ ಸಂಕೇತ. ಟೀನೇಜ್ಗೆ ಎಂಟ್ರಿ ಕೊಟ್ಟಿರುವ ಚಿಕ್ಕಬಳ್ಳಾಪುರದ ಹಲವು ಆಶಯಗಳು ಈಡೇರಿವೆ. ಆದರೆ ಗುರಿ ನವ ಚಿಕ್ಕಬಳ್ಳಾಪುರದ ನಿರ್ಮಾಣದ ಮೂಲಕ, ನವ ಕರ್ನಾಟಕ ಹಾಗೂ ನವ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವುದು ಆಗಿದೆ ಎಂದು ಹೇಳಿದರು.
20-25 ವರ್ಷಗಳಿಂದ ನೀರಿನ ಬರ ಎದುರಿಸಿದ್ದ ಜಿಲ್ಲೆ ಈಗ ಅಂತರ್ಜಲದ ಮಟ್ಟವನ್ನು ಹೆಚ್ಚಿಸಿಕೊಂಡಿದೆ. ಇಡೀ ಜಿಲ್ಲೆಯ ಕೆರೆಗಳು ತುಂಬಿ ಹಸಿರಿನಿಂದ ಕಂಗೊಳಿಸುತ್ತಿವೆ. ವೈದ್ಯಕೀಯ ಕಾಲೇಜು ಮೂಲಕ ದಶಕಗಳ ಕನಸು ನನಸಾಗಿದೆ. ರೈತರು, ವಿದ್ಯಾರ್ಥಿಗಳು ಹೀಗೆ ಜಿಲ್ಲೆಯ ಎಲ್ಲಾ ವರ್ಗದ ಜನರು ಸಂತಸದಿಂದ ಇರುವುದರಿಂದ ಈ ಹಬ್ಬ ಆಚರಿಸಲಾಗುತ್ತಿದೆ. ಕೆಲ ವರ್ಷಗಳ ಹಿಂದೆ 1,500 ಅಡಿಗಳಿಂದ ನೀರು ತೆಗೆದು ಕಷ್ಟದ ನಡುವೆಯೂ ಜೀವನ ಮಾಡಿದ್ದ ಈ ನಾಡಿನ ರೈತರು ಪ್ರಗತಿಪರರು. ಬೆಂಗಳೂರಿನ ಬೇಡಿಕೆಯ ಶೇ.70 ರಷ್ಟು ತರಕಾರಿಗಳನ್ನು ಚಿಕ್ಕಬಳ್ಳಾಪುರ ಮತ್ತು ಕೋಲಾರದಿಂದಲೇ ಒದಗಿಸಲಾಗುತ್ತಿದೆ ಅನ್ನುವುದು ನಮ್ಮ ರೈತರ ಹೆಮ್ಮೆ ಎಂದರು.
ಈ ಜಿಲ್ಲೆಯಲ್ಲಿ ಒಂದೂ ನದಿಗಳು ಹರಿಯುವುದಿಲ್ಲ. ಆದರೆ 5 ಪವಿತ್ರ ನದಿಗಳು ಉಗಮವಾಗುತ್ತಿವೆ. ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. 2ನೇ ಜಲಿಯನ್ ವಾಲಾಭಾಗ್ ಎಂದು ಕರೆಸಿಕೊಳ್ಳುವ ವಿಧುರಾಶ್ವತ್ಥ ಐತಿಹಾಸಿಕವಾಗಿದೆ. 2 ಭಾರತ ರತ್ನಗಳು ( ಸರ್.ಎಂ. ವಿಶ್ವೇಶ್ವರಯ್ಯ ಮತ್ತು ಪ್ರೋ. ಸಿಎನ್ಆರ್ ರಾವ್) ಇದೇ ನಾಡಿನವರು ಎಂಬುದು ನಮ್ಮ ಹೆಮ್ಮೆ. ತಪಸ್ವಿಗಳು, ಸಾಧು ಸಂತರು ಮೆಟ್ಟಿದ ಈ ನೆಲ ಫಲಪುಷ್ಪಗಳ ಗಿರಿಧಾಮ ಎಂದು ಹೇಳಿದರು.
ಭಗೀರಥ ಬೊಮ್ಮಾಯಿ
ನೀರಾವರಿ ಸಚಿವರಾಗಿದ್ದಾಗ ಎತ್ತಿನಹೊಳೆ ಯೋಜನೆ ರೂಪಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರು ಈ ಜಿಲ್ಲೆಯ *ನಿಜವಾದ ಭಗೀರಥ. ಅಷ್ಟೇ ಅಲ್ಲ ಈ ಯೋಜನೆಯ ಮೂಲ ವೆಚ್ಚವನ್ನು 13,000 ಕೋಟಿ ರೂ. ನಿಂದ 23,000 ಕೋಟಿ ರೂ.ಗೆ ಏರಿಸಿ ಜಿಲ್ಲೆಗೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ದಿ.ಶಂಕರ್ನಾಗ್ ಅವರ ಕನಸಾಗಿದ್ದ ನಂದಿಬೆಟ್ಟದ ರೋಪ್ ವೇ 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಎಲ್ಲವನ್ನೂ ಮುಂದಿನ 7 ದಿನಗಳಲ್ಲಿ ಹಬ್ಬವನ್ನಾಗಿ ಆಚರಿಸಿಕೊಂಡು, ಬೆಂಗಳೂರಿಗೆ ಸಹಕಾರವಾಗಿ ಚಿಕ್ಕಬಳ್ಳಾಪುರವನ್ನು ಬೆಳೆಸಲು ಪ್ರಯತ್ನ ಪಡುವುದಾಗಿ ಅವರು ಹೇಳಿದರು.
ಅದ್ದೂರಿ ಮೆರವಣಿಗೆ
ವೇದಿಕೆ ಕಾರ್ಯಕ್ರಮ ಆರಂಭಕ್ಕೆ ಮುನ್ನ ಚಿಕ್ಕಬಳ್ಳಾಪುರ ನಗರದಲ್ಲಿ ಬೆಳಗ್ಗೆ ಸಾಂಸ್ಕೃತಿಕ ಕಲಾ ತಂಡಗಳನ್ನೊಳಗೊಂಡಂತೆ ವಿಜೃಂಭಣೆಯ ಮೆರವಣಿಗೆ ನಡೆಯಿತು. ಚಿಕ್ಕಬಳ್ಳಾಪುರದ ಇತಿಹಾಸ, ಕಲಾ ಶ್ರೀಮಂತಿಕೆಯನ್ನು ಪ್ರದರ್ಶನ ಮಾಡುವ ಮೆರವಣಿಗೆ ಜನಮನಸೂರೆಗೊಂಡಿತು.
ಫಲ ಪುಷ್ಪ ಗಿರಿಧಾಮ ನಾಡು
ಚಿಕ್ಕಬಳ್ಳಾಪುರ ಜಿಲ್ಲೆಗೆ ʼಫಲ ಪುಷ್ಪ ಗಿರಿಧಾಮ ನಾಡುʼ ಎಂಬ ಹೆಸರನ್ನು ನೀಡಲಾಗಿದ್ದು, ಕಾರ್ಯಕ್ರಮದಲ್ಲಿ ಈ ಹೆಸರನ್ನು ಅನಾವರಣ ಮಾಡಲಾಯಿತು.
ಕಿಚ್ಚ ಸುದೀಪ್ ಮೆರುಗು
ಕಾರ್ಯಕ್ರಮಕ್ಕೆ ಬಂದ ಜನಪ್ರಿಯ ಚಿತ್ರ ನಟ ಸುದೀಪ್ ಅವರು ಹೆಚ್ಚು ಮೆರುಗು ತಂದರು. ಕೋವಿಡ್ ಸಮಯದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.
ರಾಜ್ಯಸಭಾ ಸದಸ್ಯರು, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗೆಡೆ, ಸಚಿವರಾದ ವಿ.ಸುನಿಲ್ಕುಮಾರ್, ಭೈರತಿ ಬಸವರಾಜು, ಎಂಟಿಬಿ ನಾಗರಾಜ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Good News : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ; ತೆರಿಗೆದಾರರಿಗೆ ಬಿಗ್ ರಿಲೀಫ್, ಅವಧಿ ವಿಸ್ತರಣೆ |Income Tax
Karnataka Covid19 Update: ರಾಜ್ಯದಲ್ಲಿ ಇಂದು 26 ಮಂದಿಗೆ ಕೊರೋನಾ ದೃಢ: ಸಕ್ರೀಯ ಸೋಂಕಿತರ ಸಂಖಅಯೆ 235ಕ್ಕೆ ಏರಿಕೆ