ಬೆಂಗಳೂರು : ಪರಿಷತ್ತಿನ 7 ಸ್ಥಾನಗಳಿಗೆ ಪಕ್ಷದಲ್ಲಿ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಎಲ್ಲರೂ ಬ್ಲಾಕ್, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪಕ್ಷಕ್ಕೆ ದುಡಿದಿದ್ದಾರೆ. ಹಾಗಾಗಿ ಈ ಬಾರಿ ಎಲ್ಲಾ ವರ್ಗದವರಿಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಟಿಕೆಟ್ ಹಂಚಿಕೆ ಸಂಬಂಧ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಟಿಕೆಟ್ಗೆ ಕಾಂಗ್ರೆಸ್ ಪಕ್ಷದಲ್ಲಿ ಮುನ್ನೂರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಹಂಚಿಕೆ ಮಾನದಂಡವನ್ನು ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ ಎಂದು ಅವರು ತಿಳಿಸಿದರು.
ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಭಾಗ ಸೇರಿದಂತೆ ಎಲ್ಲಾ ಕಡೆಗಳಿಗೆ ಅವಕಾಶ ನೀಡಬೇಕು ಎನ್ನುವ ಬೇಡಿಕೆ ಇದೆ. ಕೆಲವು ಸ್ಥಾನಗಳಲ್ಲಿ ಹಾಲಿ ಸದಸ್ಯರು ಇದ್ದಾರೆ. ಹೀಗಾಗಿ ಈ ಬಾರಿ ಕಷ್ಟಕರ ಪರಿಸ್ಥಿತಿ ಎದುರಾಗಿದೆ. ಹೈಕಮಾಂಡ್ ಯಾವ ತೀರ್ಮಾನ ಮಾಡಲಿದೆ ಎಂದು ನೋಡೋಣ ಎಂದು ಅವರು ತಿಳಿಸಿದರು.