ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಮಹಿಳಾ ಸುರಕ್ಷತೆಯ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಸಹೋದರಿಯ ಮನೆಗೆ ಹೋಗಲು ಓಲಾ ಕ್ಯಾಬ್ ಬುಕ್ ಮಾಡಿದ್ದ 27 ವರ್ಷದ ಯುವತಿಯನ್ನು ಚಾಲಕನೊಬ್ಬ ಟ್ರಾಫಿಕ್ ಜಾಮ್ ನೆಪದಲ್ಲಿ ಮಧ್ಯರಾತ್ರಿ ಬೇರೆ ಬೇರೆ ಕಡೆ ಸುತ್ತಾಡಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಓಲಾ ಕ್ಯಾಬ್ ಚಾಲಕನ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಚಾಲಕನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಟ್ರಾಫಿಕ್ ನೆಪದಲ್ಲಿ ಹಾದಿ ತಪ್ಪಿಸಿದ ಚಾಲಕ
ಪೊಲೀಸ್ ಮೂಲಗಳ ಪ್ರಕಾರ, ಜೂನ್ 9ರ ಮಂಗಳವಾರ ರಾತ್ರಿ ಸುಮಾರು 12.37ರ ಸುಮಾರಿಗೆ ಎ. ನಾರಾಯಣಪುರ ನಿವಾಸಿಯಾದ ಯುವತಿಯು ಆದೂರಿನಲ್ಲಿರುವ ತನ್ನ ಸಹೋದರಿಯ ಮನೆಗೆ ಹೋಗಲು ಓಲಾ ಕ್ಯಾಬ್ ಬುಕ್ ಮಾಡಿದ್ದಳು. ಆದರೆ, ಕಾರು ಹತ್ತಿದ ಬಳಿಕ ಚಾಲಕ ಯುವತಿ ನೀಡಿದ ನಿಗದಿತ ವಿಳಾಸದ ಮಾರ್ಗವಾಗಿ ಹೋಗದೆ, ಉದ್ದೇಶಪೂರ್ವಕವಾಗಿ ಬೇರೆ ದಾರಿಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ.
ತಾನು ಹೋಗಬೇಕಾದ ದಾರಿ ಬದಲಾಗುತ್ತಿರುವುದನ್ನು ಗಮನಿಸಿದ ಯುವತಿ, ಈ ಬಗ್ಗೆ ಹಿಂದಿ ಭಾಷೆಯಲ್ಲಿ ಚಾಲಕನನ್ನು ಪ್ರಶ್ನಿಸಿದ್ದಾಳೆ. ಇದಕ್ಕೆ ಉಡಾಫೆಯಿಂದಲೇ ಉತ್ತರಿಸಿದ ಚಾಲಕ, ಮುಖ್ಯ ರಸ್ತೆಯಲ್ಲಿ “ಭಾರಿ ಟ್ರಾಫಿಕ್ ಜಾಮ್ ಇದೆ” ಎಂಬ ನೆಪ ಹೇಳಿ ಕಾರನ್ನು ನಗರದ ವಿವಿಧ ರಸ್ತೆಗಳಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಅಂದರೆ ಮಧ್ಯರಾತ್ರಿ 2 ಗಂಟೆಯವರೆಗೆ ಸತತವಾಗಿ ಸುತ್ತಾಡಿಸಿದ್ದಾನೆ.
ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನ
ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಆದೂರು ಕ್ರಾಸ್ ಸಮೀಪವಿರುವ ಪ್ಯಾರಾಮೌಂಟ್ ಶಾಲೆಯ ಕಡೆಯ ನಿರ್ಜನ ಪ್ರದೇಶಕ್ಕೆ ಕಾರನ್ನು ತಂದ ಚಾಲಕ, ಒಂಟಿ ಯುವತಿಯನ್ನು ಕಂಡು ತನ್ನ ವಿಕೃತ ಬುದ್ಧಿ ಪ್ರದರ್ಶಿಸಿದ್ದಾನೆ. ಕಾರನ್ನು ನಿಲ್ಲಿಸಿ ಯುವತಿಯ ಮೇಲೆ ದೈಹಿಕ ದೌರ್ಜನ್ಯ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ವಿವರವಾಗಿ ಉಲ್ಲೇಖಿಸಿದ್ದಾಳೆ.
ಆದರೆ, ಚಾಲಕನ ಈ ಕೃತ್ಯದಿಂದ ಧೃತಿಗೆಡದ ಯುವತಿ ಆತನಿಗೆ ತೀವ್ರ ಪ್ರತಿರೋಧ ಒಡ್ಡಿದ್ದಾಳೆ. ತಕ್ಷಣವೇ ತನ್ನ ಮೊಬೈಲ್ ಫೋನ್ ಮೂಲಕ ಸಂಬಂಧಿಕರಿಗೆ ಕರೆ ಮಾಡಿ, ಜೋರಾಗಿ ಕಿರುಚಾಡಿ ಸಹಾಯಕ್ಕಾಗಿ ಆಕ್ರಂದನ ಮುಗಿಲು ಮುಟ್ಟಿಸಿದ್ದಾಳೆ. ಯುವತಿಯ ಈ ಧೈರ್ಯ ಮತ್ತು ಜೋರಾದ ಕಿರುಚಾಟದಿಂದ ಹೆದರಿದ ಚಾಲಕ, ಸಿಕ್ಕಿಬೀಳುವ ಭೀತಿಯಿಂದ ಯುವತಿಯನ್ನು ಕಾರಿನಿಂದ ಕೆಳಕ್ಕೆ ತಳ್ಳಿ ಸ್ಥಳದಿಂದ ರೇಸ್ ಮಾಡಿಕೊಂಡು ಪರಾರಿಯಾಗಿದ್ದಾನೆ.
ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲು
ಅಪಾಯದಿಂದ ಪಾರಾದ ಯುವತಿ ನಂತರ ಆವಲಹಳ್ಳಿ ಪೊಲೀಸ್ ಠಾಣೆಗೆ ಧಾವಿಸಿ ತನಗಾದ ಅನ್ಯಾಯದ ವಿರುದ್ಧ ದೂರು ನೀಡಿದ್ದಾಳೆ. ಸದ್ಯ ಆವಲಹಳ್ಳಿ ಠಾಣೆಯ ಪೊಲೀಸರು ಅಪರಿಚಿತ ಓಲಾ ಕ್ಯಾಬ್ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಮೊಕದ್ದಮೆ ಹೂಡಿದ್ದಾರೆ. ಕ್ಯಾಬ್ ಸಂಸ್ಥೆಯಿಂದ ಚಾಲಕನ ವಿವರಗಳನ್ನು ಪಡೆದುಕೊಂಡು ಆತನನ್ನು ಬಂಧಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








