ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಯುಗಟಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕನ ವಿರುದ್ಧ ಪೊಲೀಸರು ಮೂರು ಪ್ರತ್ಯೇಕ ಎಫ್ಐಆರ್ (FIR) ದಾಖಲಿಸಿದ್ದಾರೆ.
ಶಾಲೆಯ ಶಿಕ್ಷಕ ನಾಗರಾಜ್ (A1) ಹಾಗೂ ಮುಖ್ಯ ಶಿಕ್ಷಕ ಲೋಕೇಶ್ (A2) ವಿರುದ್ಧ ಮೊಕದ್ದಮೆ ಹೂಡಲಾದ ಆರೋಪಿಗಳಾಗಿದ್ದಾರೆ. ಆರೋಪಿ ಶಿಕ್ಷಕ ನಾಗರಾಜ್ ಶಾಲೆಯ ಮೂವರು ಅಪ್ರಾಪ್ತ ಬಾಲಕಿಯರಿಗೆ ತನ್ನ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಕಡೂರು ತಾಲೂಕು ಶಿಕ್ಷಣಾಧಿಕಾರಿ (BEO) ತಿಮ್ಮಯ್ಯ ಅವರು ಯುಗಟಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಶಿಕ್ಷಕ ನಾಗರಾಜ್ ಬಾಲಕಿಯರ ಮೇಲೆ ದೌರ್ಜನ್ಯ ಎಸಗುತ್ತಿರುವ ಬಗ್ಗೆ ಈ ಹಿಂದೆಯೇ ಮುಖ್ಯ ಶಿಕ್ಷಕ ಲೋಕೇಶ್ ಅವರಿಗೆ ದೂರು ನೀಡಲಾಗಿತ್ತು. ಆದರೆ, ಮುಖ್ಯ ಶಿಕ್ಷಕರು ಈ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ, ಮೇಲಧಿಕಾರಿಗಳಿಗೂ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ದೂರು ನೀಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕ ಲೋಕೇಶ್ ಅವರನ್ನು ಪ್ರಕರಣದಲ್ಲಿ ಎರಡನೇ ಆರೋಪಿ (A2) ಎಂದು ಹೆಸರಿಸಲಾಗಿದೆ.
ಆರೋಪಿಗಳ ವಿರುದ್ಧ ಪೋಕ್ಸೋ (POCSO) ಕಾಯ್ದೆ, ಐಟಿ (IT) ಆ್ಯಕ್ಟ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ (Atrocity Act) ಸೇರಿದಂತೆ ವಿವಿಧ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ 3 ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಲಾಗಿದ್ದು, ಯುಗಟಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








