ಬೆಂಗಳೂರು : ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ದುರುಪಯೋಗವಾಗುವುದನ್ನು ತಡೆಯಲು ಮತ್ತು ನಕಲಿ ಫಲಾನುಭವಿಗಳನ್ನು ಹೊರಗಿಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಧಾನಸೌಧದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಭೆಯಲ್ಲಿ ಸಿಎಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
ಮನೆ ಮನೆಗೆ ತೆರಳಿ ದಾಖಲೆಗಳ ಪರಿಶೀಲನೆ:
ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಫಲಾನುಭವಿಗಳು ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ಅದರ ಬದಲಿಗೆ ಅಧಿಕಾರಿಗಳೇ ನೇರವಾಗಿ ಮನೆ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಅಗತ್ಯವಿರುವ ದಾಖಲೆಗಳು: ಮನೆ ಯಜಮಾನಿ ಮತ್ತು ಆಕೆಯ ಪತಿಯ ಹೆಸರಿನ ದಾಖಲೆಗಳು, ವಾಸಸ್ಥಳ ಪ್ರಮಾಣಪತ್ರ, ಪಡಿತರ ಚೀಟಿ ಸಂಖ್ಯೆ, ವೋಟರ್ ಐಡಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಇ-ಕೆವೈಸಿ (e-KYC) ಆಗಿರುವ ಬ್ಯಾಂಕ್ ಪಾಸ್ಬುಕ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. ಜೊತೆಗೆ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ನೌಕರರಿದ್ದಾರೆಯೇ ಅಥವಾ ಐಟಿ/ಜಿಎಸ್ಟಿ ಪಾವತಿಸುತ್ತಿದ್ದಾರೆಯೇ ಎಂಬ ಮಾಹಿತಿಯನ್ನು ಖಚಿತಪಡಿಸಬೇಕು.
ಗೃಹಜ್ಯೋತಿ ಯೋಜನೆಗೆ ಅಗತ್ಯವಿರುವ ದಾಖಲೆಗಳು: ಉಚಿತ ವಿದ್ಯುತ್ ಸೌಲಭ್ಯ ಮುಂದುವರಿಸಲು ವಿದ್ಯುತ್ ಬಿಲ್, ವಿದ್ಯುತ್ ಸಂಪರ್ಕದ ಐಡಿ ಸಂಖ್ಯೆ, ಆಧಾರ್ ಕಾರ್ಡ್, ವೋಟರ್ ಐಡಿ, ಕರ್ನಾಟಕದ ನಿವಾಸಿ ಎಂಬುದಕ್ಕೆ ವಾಸಸ್ಥಳ ದೃಢೀಕರಣ ಪತ್ರ ಮತ್ತು ಮೊಬೈಲ್ ಸಂಖ್ಯೆ ನೀಡಬೇಕು. ಬಾಡಿಗೆ ಅಥವಾ ಲೀಸ್ ಮನೆಯಲ್ಲಿದ್ದರೆ ಅದಕ್ಕೆ ಸಂಬಂಧಿಸಿದ ಅಗ್ರಿಮೆಂಟ್ ಪತ್ರವನ್ನು ಒದಗಿಸಬೇಕಾಗುತ್ತದೆ.
ಸುಳ್ಳು ದಾಖಲೆ ನೀಡಿದರೆ ಕಾನೂನು ಕ್ರಮ ಮತ್ತು ಸ್ವಯಂ ಘೋಷಣೆ:
ಫಲಾನುಭವಿಗಳು ಕಡ್ಡಾಯವಾಗಿ ಅಸಲಿ ದಾಖಲೆಗಳನ್ನೇ ನೀಡಬೇಕಾಗಿದ್ದು, ತಾವು ಒದಗಿಸಿರುವ ಮಾಹಿತಿ ಸುಳ್ಳೆಂದು ಕಂಡುಬಂದಲ್ಲಿ ಕಾನೂನು ಕ್ರಮಕ್ಕೆ ಒಳಗಾಗಲು ಮತ್ತು ಗೃಹಲಕ್ಷ್ಮಿ ಯೋಜನೆಯಡಿ ಪಡೆದ ಹಣವನ್ನು ಸರ್ಕಾರಕ್ಕೆ ಮರುಪಾವತಿಸಲು ಬದ್ಧರಾಗಿರುವ ಕುರಿತು ಸ್ವಯಂ ಘೋಷಣಾ ಪತ್ರವನ್ನು ನೀಡಬೇಕಾಗುತ್ತದೆ.
ಕರ್ನಾಟಕದವರಿಗೆ ಮಾತ್ರ ಗ್ಯಾರಂಟಿ:
ಹೊರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಸಿ ಇಲ್ಲಿನ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿರುವವರ ಮಾಹಿತಿಯನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯೋಜನೆಗಳ ಲಾಭ ಕೇವಲ ರಾಜ್ಯದ ಅರ್ಹ ಫಲಾನುಭವಿಗಳಿಗೆ ಮಾತ್ರ ಸಿಗಬೇಕು ಹಾಗೂ ಹೊರ ರಾಜ್ಯದ ಮತದಾರರಿಗೆ ಯೋಜನೆಯ ಲಾಭ ಸಿಗದಂತೆ ತಡೆಯಬೇಕು ಎಂದು ಸಿಎಂ ತಿಳಿಸಿದ್ದಾರೆ. ಇದೇ ವೇಳೆ ಆರ್ಥಿಕವಾಗಿ ಸಬಲರಾಗಿರುವ ಮತ್ತು ಅನುಕೂಲಸ್ಥರು ಸ್ವಯಂಪ್ರೇರಿತರಾಗಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಡುವಂತೆ ಅವರು ಕರೆ ನೀಡಿದ್ದಾರೆ.
ಖಾತೆ ಬದಲಾವಣೆ ಹಾಗೂ ವಾಯ್ಸ್ ಮೆಸೇಜ್ ಸೌಲಭ್ಯ:
ಬ್ಯಾಂಕ್ ಸಾಲ ಹೊಂದಿರುವ ಕೆಲವು ಫಲಾನುಭವಿಗಳ ಗೃಹಲಕ್ಷ್ಮಿ ಹಣವು ನೇರವಾಗಿ ಸಾಲದ ಖಾತೆಗೆ ಜಮೆಯಾಗುತ್ತಿರುವುದರಿಂದ, ಅಂತಹ ಮಹಿಳೆಯರು ಬ್ಯಾಂಕ್ ಖಾತೆ ಬದಲಾಯಿಸಲು ಮುಂದಾಗುತ್ತಿದ್ದಾರೆ. ಇಂತಹ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ಖಾತೆಗೆ ಹಣ ಜಮೆಯಾದ ತಕ್ಷಣ ಅವರ ಮೊಬೈಲ್ಗೆ ವಾಯ್ಸ್ ಮೆಸೇಜ್ (ದನಿ ಸಂದೇಶ) ಹೋಗುವಂತೆ ಮಾಡಲು ಸಿಎಂ ಸೂಚಿಸಿದ್ದಾರೆ.
ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಚಿಂತನೆ:
ಮಹಿಳೆಯರ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಗಾಗಿ ಸ್ಮಾರ್ಟ್ ಕಾರ್ಡ್ ವಿತರಿಸಲು ಸರ್ಕಾರ ಯೋಜಿಸುತ್ತಿದೆ. ಈ ಕಾರ್ಡ್ ಗಳು ಸ್ವೈಪ್ ಅಥವಾ ಟ್ಯಾಪ್ ಮಾಡುವ ಮಾದರಿಯಲ್ಲಿ ಇರಬೇಕೇ ಎಂಬ ಬಗ್ಗೆ ಸದ್ಯ ಅಧ್ಯಯನ ನಡೆಸಲಾಗುತ್ತಿದೆ.








