ಚಿಕ್ಕಮಗಳೂರು: ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಇಂದು ನಗರದ ಐಡಿಎಸ್‌ಜಿ (IDSG) ಸರ್ಕಾರಿ ಕಾಲೇಜಿನಲ್ಲಿ ಮುಕ್ತಾಯಗೊಂಡಿದೆ. ಹೈಕೋರ್ಟ್ ಆದೇಶದಂತೆ ನಡೆದ ಈ ಮರು ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ತಮ್ಮ ಗೆಲುವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ದೀರ್ಘಕಾಲದ ಕಾನೂನು ಹೋರಾಟಕ್ಕೆ ಸದ್ಯ ತೆರೆ ಬಿದ್ದಂತಾಗಿದೆ.
ತೀವ್ರಗೊಂಡ ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿ
ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದಲೂ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ವಾತಾವರಣ ನಿರ್ಮಾಣವಾಗಿತ್ತು. ಅಂಚೆ ಮತಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಕಾನೂನು ಹೋರಾಟ ಆರಂಭಿಸಿದ್ದರು. ಇಂದು ಮರು ಎಣಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕಾಲೇಜು ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎರಡೂ ಪಕ್ಷಗಳ ಕಾರ್ಯಕರ್ತರು ಫಲಿತಾಂಶಕ್ಕಾಗಿ ಕಾದು ಕುಳಿತಿದ್ದು, ರಾಜಕೀಯ ಸಂಚಲನ ಮೂಡಿಸಿತ್ತು.
ಮರು ಎಣಿಕೆಯ ಅಂಕಿ-ಅಂಶಗಳ ವಿವರ
ಶೃಂಗೇರಿ ಕ್ಷೇತ್ರದಲ್ಲಿ ಒಟ್ಟು 1,822 ಅಂಚೆ ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಆರಂಭದಲ್ಲಿ 279 ಮತಗಳನ್ನು ವಿವಿಧ ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲಾಗಿತ್ತು. ಈ ತಿರಸ್ಕೃತ ಮತಗಳಲ್ಲೇ ಗೊಂದಲ ಸೃಷ್ಟಿಯಾಗಿದ್ದು, ಅವುಗಳಲ್ಲಿ 12 ಮತಗಳು ನಾಪತ್ತೆಯಾಗಿರುವುದು ವರದಿಯಾಗಿದೆ. ಉಳಿದಂತೆ 3 ಮತಗಳು ‘ನೋಟಾ’ಗೆ ಚಲಾವಣೆಯಾಗಿದ್ದು, ಅಂತಿಮವಾಗಿ 1,540 ಅಂಚೆ ಮತಗಳನ್ನು ಮರು ಎಣಿಕೆಗೆ ಪರಿಗಣಿಸಲಾಗಿತ್ತು. ಈ ಎಲ್ಲಾ ಪ್ರಕ್ರಿಯೆಗಳ ನಂತರ ರಾಜೇಗೌಡ ಅವರ ಗೆಲುವನ್ನು ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಿಸಿದರು.
ಕಾನೂನು ಹೋರಾಟ ಮತ್ತು ಹೈಕೋರ್ಟ್ ಆದೇಶ
ಹಿಂದೆ ನಡೆದ ಮತ ಎಣಿಕೆಯ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಮರು ಎಣಿಕೆಗೆ ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪಾರದರ್ಶಕತೆಯ ದೃಷ್ಟಿಯಿಂದ ಅಂಚೆ ಮತಗಳನ್ನು ಮರು ಎಣಿಕೆ ಮಾಡುವಂತೆ ಆದೇಶಿಸಿತ್ತು. ಈ ಆದೇಶದ ಅನ್ವಯವೇ ಇಂದು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಎಣಿಕೆ ಕಾರ್ಯ ಪೂರ್ಣಗೊಂಡಿದೆ.
ಕಾರ್ಯಕರ್ತರ ಸಂಭ್ರಮಾಚರಣೆ
ಮರು ಎಣಿಕೆಯಲ್ಲೂ ರಾಜೇಗೌಡ ಅವರ ಗೆಲುವು ಖಚಿತವಾಗುತ್ತಿದ್ದಂತೆ ಐಡಿಎಸ್‌ಜಿ ಕಾಲೇಜಿನ ಮುಂಭಾಗದಲ್ಲಿ ನೆರೆದಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು, ತಮ್ಮ ನಾಯಕನ ಪರ ಘೋಷಣೆಗಳನ್ನು ಕೂಗಿದರು. ಈ ಫಲಿತಾಂಶವು ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಹೊಸ ಉತ್ಸಾಹ ತುಂಬಿದೆ.
ಪ್ರಕರಣ ಹಿನ್ನೆಲೆ
2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೀವರಾಜ್ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ ರಾಜೇಗೌಡ ಎದುರು 201 ಮತಗಳ ಅಂತರದಿಂದ ಸೋತಿದ್ದರು. ಒಟ್ಟು 1822 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕೃತವಾಗಿದ್ದವು. ಈ ಫಲಿತಾಂಶವನ್ನು ಪ್ರಶ್ನಿಸಿ ಡಿ.ಎನ್. ಜೀವರಾಜ್ ಮರು ಎಣಿಕೆಗೆ ಮನವಿ ಮಾಡಿದ್ದರು ಕೂಡ ಅಂದಿನ ಜಿಲ್ಲಾ ಚುನಾವಣಾಧಿಕಾರಿ ಅದನ್ನು ಪರಿಗಣಿಸದೆ ಟಿ.ಡಿ. ರಾಜೇಗೌಡರನ್ನು ವಿಜೇತರೆಂದು ಘೋಷಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ಇಂದು ಮರು ಎಣಿಕೆ ನಡೆದಿದೆ.








