ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ . ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರ ಪತ್ನಿ ಜಯಮ್ಮ ಅವರು ಇಂದು (ಜೂನ್ 16) ಬೆಳಗ್ಗೆ ವಿಧಿವಶರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಜಯಮ್ಮ ಅವರು ಕೇವಲ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿಯಷ್ಟೇ ಅಲ್ಲ, ತಮ್ಮ ಕುಟುಂಬದ ಬೆನ್ನೆಲುಬಾಗಿ ನಿಂತಿದ್ದ ವ್ಯಕ್ತಿತ್ವವಾಗಿದ್ದರು. ಹಿರಿಯ ನಿರ್ಮಾಪಕರಾದ ಎಸ್.ಎ. ಚಿನ್ನೇಗೌಡ ಅವರ ಸಿನಿ ಪಯಣಕ್ಕೂ, ಮಕ್ಕಳ ಕಲಾ ಬದುಕಿನ ಬೆಳವಣಿಗೆಯಲ್ಲೂ ಅವರು ಅಪಾರ ಬೆಂಬಲ ನೀಡಿದ್ದರು.
ಜಯಮ್ಮ ಅವರ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು, ನಿರ್ಮಾಪಕರು ಹಾಗೂ ತಂತ್ರಜ್ಞರು ತೀವ್ರ ಸಂತಾಪ ಸೂಚಿಸಿದ್ದಾರೆ.








