ನವದೆಹಲಿ: ಭಾರತೀಯ ಕುಟುಂಬಗಳ ಎಲ್ಪಿಜಿ ಸಿಲಿಂಡರ್ ಬುಕಿಂಗ್ಗೆ ಸಂಬಂಧಿಸಿದಂತೆ ಜೂನ್ 30, 2026 ರೊಳಗೆ ಹಲವು ಪ್ರಮುಖ ಗಡುವುಗಳು ಎದುರಾಗಲಿವೆ. ಎಲ್ಪಿಜಿ ಸಬ್ಸಿಡಿಗಾಗಿ ಇ-ಕೆವೈಸಿ (eKYC) ಪೂರ್ಣಗೊಳಿಸುವುದರಿಂದ ಹಿಡಿದು, ಪೈಪ್ಡ್ ನೈಸರ್ಗಿಕ ಅನಿಲ (PNG) ಸೌಲಭ್ಯವಿರುವ ಪ್ರದೇಶಗಳಲ್ಲಿ ಪಿಎನ್ಜಿ ಕನೆಕ್ಷನ್ ಅಳವಡಿಸಿಕೊಳ್ಳುವವರೆಗೆ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಇದರೊಂದಿಗೆ ಮುಂದಿನ ತಿಂಗಳಿನಿಂದ ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಗಳೂ ಸಹ ಬದಲಾಗುವ ಸಾಧ್ಯತೆಯಿದೆ.
ಗ್ರಾಹಕರು ತಿಳಿದುಕೊಳ್ಳಬೇಕಾದ ಆ 5 ಪ್ರಮುಖ ಬದಲಾವಣೆಗಳು ಇಲ್ಲಿವೆ:
1. ಜೂನ್ 30 ರೊಳಗೆ ಇ-ಕೆವೈಸಿ ಕಡ್ಡಾಯ (LPG Aadhaar-eKYC)
ಫೆಬ್ರವರಿ ಅಂತ್ಯದಲ್ಲಿ ನಡೆದ ಜಾಗತಿಕ ರಾಜಕೀಯ ಉದ್ವಿಗ್ನತೆಯ ನಂತರ, ನಿಜವಾದ ಗ್ರಾಹಕರಿಗೆ ಮಾತ್ರ ಎಲ್ಪಿಜಿ ಸಿಲಿಂಡರ್ ಸಿಗುವಂತೆ ಮಾಡಲು ಸರ್ಕಾರವು ಆಧಾರ್ ಬಯೋಮೆಟ್ರಿಕ್ ದೃಢೀಕರಣವನ್ನು (Aadhaar-Biometric Authentication) ಕಡ್ಡಾಯಗೊಳಿಸಿದೆ.
PMUY ಗ್ರಾಹಕರು: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳಿಗೆ ಆಧಾರ್ ಆಧಾರಿತ ದೃಢೀಕರಣ ಕಡ್ಡಾಯವಾಗಿದೆ.
ಸಾಮಾನ್ಯ ಗ್ರಾಹಕರು: ಸಾಮಾನ್ಯ ಗ್ರಾಹಕರು ಈಗಾಗಲೇ ಇ-ಕೆವೈಸಿ ಮಾಡಿಸಿದ್ದರೆ, ಅವರು ಮತ್ತೊಮ್ಮೆ ಮಾಡುವ ಅಗತ್ಯವಿಲ್ಲ. ಆದರೆ, ಇದುವರೆಗೆ ಇ-ಕೆವೈಸಿ ಮಾಡಿಸದ ಗ್ರಾಹಕರು ತಮ್ಮ ಎಲ್ಪಿಜಿ ಸಬ್ಸಿಡಿಯನ್ನು ಸಕ್ರಿಯವಾಗಿಟ್ಟುಕೊಳ್ಳಲು ಜೂನ್ 30, 2026 ರೊಳಗೆ ಇ-ಕೆವೈಸಿ ಪೂರ್ಣಗೊಳಿಸುವಂತೆ ಇಂಡಿಯನ್ ಆಯಿಲ್ ನಿರ್ದೇಶನ ನೀಡಿದೆ.
2. ಡ್ಯುಯಲ್ ಗ್ಯಾಸ್ ಕನೆಕ್ಷನ್ ಇರುವಂತಿಲ್ಲ (No Dual Connection)
ಹೊಸ ನಿಯಮಗಳ ಪ್ರಕಾರ, ಯಾವುದೇ ಗ್ರಾಹಕರು ಒಂದೇ ಸಮಯದಲ್ಲಿ ಎಲ್ಪಿಜಿ (ಸಿಲಿಂಡರ್) ಮತ್ತು ಪಿಎನ್ಜಿ (ಪೈಪ್ಲೈನ್ ಗ್ಯಾಸ್) ಎರಡೂ ಕನೆಕ್ಷನ್ಗಳನ್ನು ಹೊಂದುವಂತಿಲ್ಲ. ನಿಮ್ಮ ಪ್ರದೇಶದಲ್ಲಿ ಪಿಎನ್ಜಿ ಲಭ್ಯವಿದ್ದರೆ, ನೀವು ಅದಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ನಿಮ್ಮ ಹಳೆಯ ಇಂಡೇನ್, ಭಾರತ್ ಅಥವಾ ಎಚ್ಪಿ ಎಲ್ಪಿಜಿ ಕನೆಕ್ಷನ್ ಅನ್ನು ಸರೆಂಡರ್ (ರದ್ದು) ಮಾಡಬೇಕಾಗುತ್ತದೆ.
3. PNG ಗ್ರಾಹಕರಿಗೆ ಹೊಸ ಎಲ್ಪಿಜಿ ಅಥವಾ ರೀಫಿಲ್ ಇಲ್ಲ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೊಸ ಆದೇಶದ ಪ್ರಕಾರ, ಈಗಾಗಲೇ ಪಿಎನ್ಜಿ ಕನೆಕ್ಷನ್ ಹೊಂದಿರುವ ಗ್ರಾಹಕರು ಯಾವುದೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಥವಾ ವಿತರಕರಿಂದ ಹೊಸ ಎಲ್ಪಿಜಿ ಕನೆಕ್ಷನ್ ಪಡೆಯಲು ಅಥವಾ ಸಿಲಿಂಡರ್ ರೀಫಿಲ್ ಮಾಡಲು ಅವಕಾಶವಿರುವುದಿಲ್ಲ.
4.PNGಗೆ ಬದಲಾಗದಿದ್ದರೆ LPG ಕನೆಕ್ಷನ್ ಕಟ್?
ಮಾರ್ಚ್ 24, 2026 ರಂದು ಸರ್ಕಾರ ಹೊರಡಿಸಿದ ಹೊಸ ಆದೇಶದ ಪ್ರಕಾರ, ಪಿಎನ್ಜಿ ಸೌಲಭ್ಯವಿರುವ ಪ್ರದೇಶಗಳಲ್ಲಿನ ಎಲ್ಪಿಜಿ ಗ್ರಾಹಕರಿಗೆ ಪಿಎನ್ಜಿಗೆ ಬದಲಾಗಲು 3 ತಿಂಗಳ (90 ದಿನಗಳು) ಕಾಲಾವಕಾಶ ನೀಡಲಾಗಿತ್ತು. ಈ ಗಡುವು ಜೂನ್ ತಿಂಗಳಿಗೆ ಮುಕ್ತಾಯಗೊಳ್ಳಲಿದ್ದು, ಪಿಎನ್ಜಿ ಲಭ್ಯವಿದ್ದರೂ ಬದಲಾಗದ ಕುಟುಂಬಗಳ ಎಲ್ಪಿಜಿ ಪೂರೈಕೆಯನ್ನು ಸ್ಥಗಿತಗೊಳಿಸಬಹುದು ಅಥವಾ ಅಮಾನತುಗೊಳಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಧಿಕೃತವಾಗಿ ದಿನಾಂಕ ಪ್ರಕಟಿಸದಿದ್ದರೂ, ಈ ಗಡುವು ಜೂನ್ 30 ರಂದೇ ಕೊನೆಗೊಳ್ಳುವ ನಿರೀಕ್ಷೆಯಿದೆ.
5. LPG ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ
ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ತಿಳಿಯಾಗುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಎಲ್ಪಿಜಿ ಬೆಲೆಗಳು ಇಳಿಕೆಯಾಗುವ ಮುನ್ಸೂಚನೆ ಇದೆ. ಆದರೆ, ಜೂನ್ ತಿಂಗಳ ಆರಂಭದಲ್ಲಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.








