ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಂಗಳೂರು ಮಂಗಳೂರು ರಾಷ್ಟೀಯ ಹೆದ್ದಾರಿ ಬಳಿ ಬೆಳ್ಳಂಬೆಳಗ್ಗೆ ಭೀಕರವಾದಂತಹ ಸರಣಿ ಅಪಘಾತ ನಡೆದಿದ್ದು, ಈ ಒಂದು ಅಪಘಾತದಲ್ಲಿ 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಪುತ್ತೂರು ತಾಲೂಕಿನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಬೆಳ್ಳಂಬೆಳಗ್ಗೆ ಖಾಸಗಿ ಬಸ್, ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಬೆಂಗಳೂರು ಮೂಲದ ಕಾಲೇಜು ವಿದ್ಯಾರ್ಥಿಗಳು ಖಾಸಗಿ ಬಸ್ನಲ್ಲಿ ಕುಂದಾಪುರಕ್ಕೆ ಪ್ರವಾಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದರು.
ಮರಳಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾಗಿ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ. ಹಿಂದಿನಿಂದ ಬರುತ್ತಿದ್ದ ಕಾರು ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆಯುವ ಮೂಲಕ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ನೆಲ್ಯಾಡಿ ಮತ್ತು ಕಡಬದ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.