ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಬೆಂಗಳೂರಿನ ವಿಧಾನಸೌಧದಲ್ಲಿ ಬಿರುಸಿನಿಂದ ಸಾಗುತ್ತಿದೆ. ಇಂದು ಬೆಳಗ್ಗಿನಿಂದಲೇ ಶಾಸಕರು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಹಕ್ಕು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 12 ಗಂಟೆಯವರೆಗಿನ ಮಾಹಿತಿ ಪ್ರಕಾರ, ಒಟ್ಟು 185 ಶಾಸಕರು ಈಗಾಗಲೇ ತಮ್ಮ ಮತವನ್ನು ಚಲಾಯಿಸಿದ್ದು, ಮತದಾನ ಪ್ರಕ್ರಿಯೆ ಸುಸೂತ್ರವಾಗಿ ಮುನ್ನಡೆಯುತ್ತಿದೆ.
ಆದರೆ, ಇದೇ ಹೊತ್ತಿನಲ್ಲಿ ಆಡಳಿತರೂಢ ಕಾಂಗ್ರೆಸ್ ಪಾಳಯದಲ್ಲಿ ದಿಢೀರ್ ರಾಜಕೀಯ ತಂತ್ರಗಾರಿಕೆ ಬದಲಾವಣೆಯಾಗಿದೆ. ಚುನಾವಣೆಗೆ ಮುನ್ನ ನಡೆದ ‘ಮಾಕ್ ವೋಟಿಂಗ್’ (ಅಣಕು ಮತದಾನ) ವೇಳೆ ಕಾಂಗ್ರೆಸ್ ಶಾಸಕರಿಂದ ಗಂಭೀರ ಲೋಪದೋಷಗಳು ಕಂಡುಬಂದಿವೆ. ಮೊದಲ ಸುತ್ತಿನ ಅಣಕು ಮತದಾನದಲ್ಲಿ 15 ಮತಗಳು ಹಾಗೂ ಎರಡನೇ ಸುತ್ತಿನಲ್ಲಿ 4 ಮತಗಳು ಸೇರಿದಂತೆ ಒಟ್ಟು 19 ಮತಗಳು ತಾಂತ್ರಿಕ ಕಾರಣಗಳಿಂದಾಗಿ ‘ಲ್ಯಾಪ್ಸ್’ (ತಿರಸ್ಕೃತ) ಆಗಿರುವುದು ನಾಯಕರ ಆತಂಕಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರು, ತಮ್ಮ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ತಕ್ಷಣವೇ ಹೊಸ ತಂತ್ರಗಾರಿಕೆಯನ್ನು ರೂಪಿಸಿದ್ದಾರೆ. ನಿನ್ನೆಯಷ್ಟೇ ನಡೆದಿದ್ದ ಆಂತರಿಕ ಸಭೆಯಲ್ಲಿ ಮೊದಲ ನಾಲ್ಕು ಅಭ್ಯರ್ಥಿಗಳಿಗೆ ತಲಾ 29 ಮತಗಳನ್ನು ಹಾಕಿಸಲು ತೀರ್ಮಾನಿಸಲಾಗಿತ್ತು. ಆದರೆ ಮಾಕ್ ವೋಟಿಂಗ್‌ನಲ್ಲಿ ಆದ ಎಡವಟ್ಟುಗಳಿಂದಾಗಿ, ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸದ ನಾಯಕರು ಈ ಯೋಜನೆಯನ್ನು ಬದಲಾಯಿಸಿದ್ದಾರೆ.
ಹೊಸ ತಂತ್ರದ ಪ್ರಕಾರ, ಮೊದಲ ನಾಲ್ಕು ಅಭ್ಯರ್ಥಿಗಳ ಸುರಕ್ಷಿತ ಗೆಲುವಿಗಾಗಿ ತಲಾ 30 ಮತಗಳನ್ನು ಹಾಕಿಸಲು ಕಾಂಗ್ರೆಸ್ ನಾಯಕರು ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಂದರೆ, ಮೊದಲ ನಾಲ್ಕು ಅಭ್ಯರ್ಥಿಗಳ ಖಾತೆಗೆ ಒಟ್ಟು 120 ಶಾಸಕರ ಮೊದಲ ಪ್ರಾಶಸ್ತ್ಯದ ಮತಗಳು ಬೀಳಲಿವೆ. ಈ ಮೂಲಕ ಆರಂಭಿಕ ನಾಲ್ಕೂ ಜನ ಅಭ್ಯರ್ಥಿಗಳನ್ನು ಯಾವುದೇ ಗೊಂದಲವಿಲ್ಲದೆ ಸುರಕ್ಷಿತವಾಗಿ ದಡ ಮುಟ್ಟಿಸುವುದು ಕೈ ನಾಯಕರ ಪ್ಲಾನ್ ಆಗಿದೆ.
ಇನ್ನು ಅತ್ಯಂತ ಪ್ರಮುಖವಾಗಿ, ಕಾಂಗ್ರೆಸ್‌ನ 5ನೇ ಅಭ್ಯರ್ಥಿಯ ಗೆಲುವಿಗೂ ವಿಶೇಷ ರಣತಂತ್ರ ಹೆಣೆಯಲಾಗಿದೆ. 5ನೇ ಅಭ್ಯರ್ಥಿಗೆ ನೇರವಾಗಿ 20 ಶಾಸಕರ ಮೊದಲ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ, ಮೊದಲ ನಾಲ್ಕು ಅಭ್ಯರ್ಥಿಗಳಿಗೆ ಮತ ಚಲಾಯಿಸುವ 120 ಶಾಸಕರಿಗೂ ಸಹ ತಮ್ಮ ‘ಎರಡನೇ ಪ್ರಾಶಸ್ತ್ಯದ ಮತ’ವನ್ನು ಕಡ್ಡಾಯವಾಗಿ 5ನೇ ಅಭ್ಯರ್ಥಿಗೇ ಹಾಕುವಂತೆ ಹಿರಿಯ ನಾಯಕರು ವ್ಹಿಪ್ ಮಾದರಿಯ ಸೂಚನೆ ನೀಡಿದ್ದಾರೆ.








