ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಂಕಾಕ್‌ನಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬರೋಬ್ಬರಿ 7.12 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಪ್ರತ್ಯೇಕ ವಿಮಾನಗಳಲ್ಲಿ ಬಂದಿಳಿದ ಇಬ್ಬರು ಪ್ರಯಾಣಿಕರ ಮೇಲೆ ಕಸ್ಟಮ್ಸ್ ಅಧಿಕಾರಿಗಳಿಗೆ ತೀವ್ರ ಅನುಮಾನ ವ್ಯಕ್ತವಾಗಿತ್ತು. ಅವರ ನಡವಳಿಕೆಯಲ್ಲಿ ಕಂಡುಬಂದ ಅಸಹಜತೆಯಿಂದ ಎಚ್ಚೆತ್ತ ಅಧಿಕಾರಿಗಳು, ತಕ್ಷಣವೇ ಅವರನ್ನು ತಡೆದು ನಿಲ್ಲಿಸಿ ತೀವ್ರ ತಪಾಸಣೆಗೆ ಒಳಪಡಿಸಿದರು.
ಅಧಿಕಾರಿಗಳು ಆರೋಪಿಗಳ ಬ್ಯಾಗ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಸಾಗಿಸುತ್ತಿದ್ದ ಪೆಡ್ಲಿಂಗ್ ಜಾಲ ಬಯಲಾಗಿದೆ. ಬ್ಯಾಗ್‌ಗಳಲ್ಲಿ ಅಡಗಿಸಿಡಲಾಗಿದ್ದ ಒಟ್ಟು 20.7 ಕೆಜಿ ತೂಕದ ಅತ್ಯಂತ ದುಬಾರಿ ತಳಿಯ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಕೋಟಿಗಟ್ಟಲೆ ಇರಲಿದ್ದು, ಕಸ್ಟಮ್ಸ್ ಸಿಬ್ಬಂದಿ ಅದನ್ನು ಸಂಪೂರ್ಣವಾಗಿ ಜಪ್ತಿ ಮಾಡಿದ್ದಾರೆ.
ಪ್ರಸ್ತುತ ಕರಾರುವಕ್ಕಾದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಬ್ಯಾಂಕಾಕ್‌ನಿಂದ ಬಂದಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಅವರನ್ನು ಬಂಧಿಸಲಾಗಿದ್ದು, ಈ ಇಬ್ಬರು ಅಂತರರಾಷ್ಟ್ರೀಯ ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿದ್ದಾರೆಯೇ ಮತ್ತು ಈ ಮಾದಕ ವಸ್ತುವನ್ನು ಬೆಂಗಳೂರಿನಲ್ಲಿ ಯಾರಿಗೆ ತಲುಪಿಸಲು ತರಲಾಗಿತ್ತು ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.








