ಬೀದರ್ : ವಕ್ಫ್ ವಿವಾದದ ಕುರಿತಂತೆ ಈಗಾಗಲೇ ವಿಪಕ್ಷಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಮಾಡುತ್ತಿದ್ದು, ಇದುವರೆಗೂ ರೈತರ ಜಮೀನುಗಳು, ಶಾಲೆ, ಸರ್ಕಾರಿ ಕಚೇರಿಗಳು ಹಾಗೂ ಹಲವು ದೇವಸ್ಥಾನಗಳ ಮೇಲೆ ವಕ್ಫ್ ನ ಕರಿನೆರಳು ಬಿದ್ದಿತ್ತು. ಇದೀಗ ಬೀದರ್ ನಲ್ಲಿರುವ ವಿಶ್ವಗುರು ಬಸವಣ್ಣನವರು ಪಠಿಸುತ್ತಿದ್ದ ವಚನ ಮಹಾಮಠ ಬಸವಗಿರಿಯ ಜಾಗವು ಕೂಡ ವಕ್ಫ್ ಎಂದು ನಮೂದಾಗಿದೆ.
ಹೌದು ಬೀದರ್‌ನ ಪಾಪನಾಶ ದೇವಸ್ಥಾನದ ಬಳಿಯಿರುವ ಬಸವಗಿರಿಯ ಸರ್ವೇ ನಂ.37ರ 5 ಎಕರೆ 19 ಗುಂಟೆ ಜಾಗ 2019ರಲ್ಲಿ ವಕ್ಫ್ಗೆ ಸೇರಿಸಿದ್ದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 2008 ರಲ್ಲಿ ಈ ಬಸವಗಿರಿ ಉದ್ಘಾಟನೆಯಾಗಿದ್ದು, ಬಹುತೇಕ 16 ವರ್ಷದಿಂದ ಪ್ರತಿ ದಿನ ಇಲ್ಲಿಗೆ ನೂರಾರು ಭಕ್ತರು ಭೇಟಿ ನೀಡಿ ಬಸವಣ್ಣನವರ ಭಾವಚಿತ್ರಕ್ಕೆ ನಮಿಸಿ ವಚನಗಳ ಪಠಣೆ ಮಾಡುತ್ತಾರೆ.
ಬೀದರ್‌ನಲ್ಲಿ ಇದುವರೆಗು ರೈತರ ಜಮೀನು, ಐತಿಹಾಸಿಕ ಸ್ಮಾರಕಗಳು, ಸರ್ಕಾರಿ ಜಾಗಗಳು ಸೇರಿದಂತೆ ಒಟ್ಟು 13 ಸಾವಿರಕ್ಕೂ ಅಧಿಕ ಆಸ್ತಿ ವಕ್ಫ್ ಪಾಲಾಗಿದೆ. ಇದೀಗ ಮತ್ತೆ ಬಗೆದಷ್ಟು ಬಯಲಾಗುತ್ತಿದ್ದು, ವಿಶ್ವಗುರು ಬಸವಣ್ಣನವರ ವಚನಮಂತ್ರ ಪಠಿಸುವ ಲಿಂಗಾಯತ ಮಹಾಮಠದ ಬಸವಗಿರಿ ಕೂಡ ವಕ್ಫ್ ಆಸ್ತಿಯಾಗಿ ಬದಲಾಗಿದೆ. ಪ್ರತಿವರ್ಷ ಇಲ್ಲಿ ವಚನ ವಿಜಯೋತ್ಸವ ಕಾರ್ಯಕ್ರಮ ಮಾಡಿ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ಆದರೆ ಇದೀಗ ಈ ಒಂದು ಜಾಗ ಕೂಡ ವಕ್ಫ್ ಪಾಲಗಿದ್ದು, ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.








