ಬೆಂಗಳೂರು : ಬೆಂಗಳೂರು: ಇಲ್ಲಿನ ವಿವೇಕನಗರ ಪೊಲೀಸರ ವಿರುದ್ಧ ಕೇಳಿಬಂದಿದ್ದ ಲಾಕಪ್ ಡೆತ್ ಆರೋಪ ಸಂಬಂಧ ಠಾಣೆಯ ಇನ್ಸ್‌ಪೆಕ್ಟರ್ ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಪ್ರಕರಣದ ತನಿಖೆ ನಡೆದು ಇನ್ಸ್‌ಪೆಕ್ಟರ್ ಶಿವಕುಮಾರ್ ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ. ಸದ್ಯ ಇಲಾಖೆ ನಡೆಸಿದ ತನಿಖೆ ಅಧಾರದ ಮೇಲೆ ಇನ್ಸ್ಪೆಕ್ಟರ್ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ. ಇದೇ ವೇಳೆ ವಿವೇಕನಗರ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಸಿಸಿಬಿ ಇನ್ಸ್‌ಪೆಕ್ಟರ್ ವಿರೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಪ್ರಕರಣ ಹಿನ್ನೆಲೆ
ಕಳೆದ ಕೆಲ ದಿನಗಳ ಹಿಂದೆ ದರ್ಶನ್ ಎಂಬ ಯುವಕ ಕುಡಿದು ಅಸಭ್ಯವಾಗಿ ವರ್ತಿಸುತ್ತಿದ್ದ. ಈ ವೇಳೆ ಠಾಣೆಗೆ ಕರೆತಂದ ಪೊಲೀಸರು, ಯುವಕನನ್ನು ಮೂರು ದಿನ ಅಕ್ರಮವಾಗಿ ಕೂಡಿ ಹಾಕಿ, ಹಿಗ್ಗಾಮುಗ್ಗಾ ಥಳಿಸಿದ್ದರು. ಬಳಿಕ ತೀವ್ರ ಅಸ್ವಸ್ಥನಾಗಿದ್ದ ಯುವಕನನ್ನು ನೆಲಮಂಗಲದ ರಿಹ್ಯಾಬ್ ಸೆಂಟರ್‌ಗೆ ಸೇರಿಸಿದ್ದರು. ಅಷ್ಟರಲ್ಲಿ ದರ್ಶನ್ ಸಾವನ್ನಪ್ಪಿದ್ದ. ಇದರಿಂದ ದರ್ಶನ್ ಪೋಷಕರು ಪೊಲೀಸರ ಹಲ್ಲೆಯಿಂದಲೇ ತಮ್ಮ ಮಗ ಸಾವನ್ನಪ್ಪಿದ್ದಾನೆ ಅಂತಾ ಆರೋಪ ಮಾಡಿದ್ದರು. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.








