ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಮತ್ತು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (UG-CET) ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಎರಡಕ್ಕೂ ಸೇರಿ ‘ಒಂದೇ ಅರ್ಜಿ’ ಸಲ್ಲಿಸುವ ಕ್ರಾಂತಿಕಾರಿ ಮತ್ತು ಹೊಸ ನಿಯಮವನ್ನು ಕೆಇಎ ಜಾರಿಗೊಳಿಸುತ್ತಿದೆ.
ಈ ಹಿಂದೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಸಿದ್ಧತೆಯ ಭರದಲ್ಲೇ ಸಿಇಟಿಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಿತ್ತು. ಇದರಿಂದ ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದರು. ಅಲ್ಲದೆ ಕೊನೆಯ ಕ್ಷಣದಲ್ಲಿ ಕೆಇಎ ವೆಬ್‌ಸೈಟ್‌ನಲ್ಲಿ ಸರ್ವರ್ ಸಮಸ್ಯೆ ಎದುರಾಗಿ, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ಬಹುತೇಕ ವಿದ್ಯಾರ್ಥಿಗಳು ವಿಫಲರಾಗುತ್ತಿದ್ದರು. ಹೊಸ ನಿಯಮದ ಜಾರಿಯಿಂದಾಗಿ ವಿದ್ಯಾರ್ಥಿಗಳ ಈ ಎಲ್ಲಾ ಸರ್ವರ್ ಸಮಸ್ಯೆ ಹಾಗೂ ಮಾನಸಿಕ ಒತ್ತಡಕ್ಕೆ ಶಾಶ್ವತ ಪರಿಹಾರ ಸಿಗಲಿದೆ.
ಸುಲಭ ಪ್ರಕ್ರಿಯೆ: ಪ್ರವೇಶದ ವೇಳೆಯೇ ಸಿಇಟಿ ಆಯ್ಕೆ
ವಿದ್ಯಾರ್ಥಿಗಳಿಗೆ ಸಿಇಟಿ ಬಗ್ಗೆ ಸಮಗ್ರ ಮಾಹಿತಿ ನೀಡಿ, ಸುಲಭವಾಗಿ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಇಎ ಹಾಗೂ ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗಳು ಜಂಟಿಯಾಗಿ ಕೈಜೋಡಿಸಿವೆ. ಹೊಸ ನಿಯಮದ ಪ್ರಕಾರ, ವಿದ್ಯಾರ್ಥಿಗಳು ಮುಂಬರುವ ಶೈಕ್ಷಣಿಕ ಸಾಲಿನಿಂದ ದ್ವಿತೀಯ ಪಿಯುಸಿ ಪ್ರವೇಶ ಪಡೆಯುವ ಸಂದರ್ಭದಲ್ಲೇ ನೀಡಲಾಗುವ ಅರ್ಜಿಯಲ್ಲಿ ‘ಸಿಇಟಿ ಆಯ್ಕೆ’ಯನ್ನು ನಮೂದಿಸಬಹುದು. ಅಲ್ಲಿಯೇ ನಿಗದಿತ ಶುಲ್ಕ ಪಾವತಿಸಿದ ಬಳಿಕ ನೇರವಾಗಿ ಪ್ರವೇಶಪತ್ರ (Hall Ticket) ಪಡೆಯುವ ಸರಳ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.
ತಪ್ಪು ಮಾಹಿತಿ ಸಲ್ಲಿಕೆಗೆ ಬೀಳಲಿದೆ ಬ್ರೇಕ್
ಸಾಮಾನ್ಯವಾಗಿ ವಿದ್ಯಾರ್ಥಿಗಳು ಸೈಬರ್ ಸೆಂಟರ್‌ಗಳ ಮೂಲಕ ಆತುರದಲ್ಲಿ ಸಿಇಟಿ ಅರ್ಜಿ ಸಲ್ಲಿಸುವಾಗ ಹೆಸರು, ಜಾತಿ ಪ್ರಮಾಣಪತ್ರ, ಆರ್‌ಡಿ (RD) ನಂಬರ್ ಸೇರಿದಂತೆ ಅನೇಕ ಪ್ರಮುಖ ತಪ್ಪುಗಳನ್ನು ದಾಖಲಿಸುತ್ತಿದ್ದರು. ಈ ಸಣ್ಣ ತಪ್ಪುಗಳಿಂದಾಗಿ ಮುಂದೆ ಸೀಟು ಹಂಚಿಕೆಯ ಕೌನ್ಸಿಲಿಂಗ್ ವೇಳೆ ದಾಖಲಾತಿ ಪರಿಶೀಲನೆಗೆ ತಿಂಗಳುಗಟ್ಟಲೆ ಅಲೆಯಬೇಕಾದ ಪರಿಸ್ಥಿತಿ ಇರುತ್ತಿತ್ತು. ಆದರೆ, ಇನ್ನು ಮುಂದೆ ವಿದ್ಯಾರ್ಥಿಗಳು ಪಿಯುಸಿಗೆ ದಾಖಲಾಗುವಾಗ ಕಾಲೇಜು ಪ್ರಾಂಶುಪಾಲರ ನೇರ ಉಸ್ತುವಾರಿಯಲ್ಲೇ ಕಂಪ್ಲೀಟ್ ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸುವುದರಿಂದ ಯಾವುದೇ ತಪ್ಪುಗಳಾಗುವ ಸಂಭವ ಇರುವುದಿಲ್ಲ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನ
ಈ ಮಹತ್ವದ ನಿರ್ಧಾರವು ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ದೊಡ್ಡ ವರದಾನವಾಗಲಿದೆ. ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಹಾಗೂ ಸೈಬರ್ ಸೆಂಟರ್‌ಗಳ ಕೊರತೆಯಿಂದಾಗಿ ಸೂಕ್ತ ಸಮಯಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ವೃತ್ತಿಪರ ಕೋರ್ಸ್‌ಗಳಿಂದ ವಂಚಿತರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ಸಂಜೀವಿನಿಯಾಗಲಿದೆ. ತಮ್ಮದೇ ಕಾಲೇಜುಗಳಲ್ಲಿ ಸುಲಭವಾಗಿ ಪ್ರಕ್ರಿಯೆ ಮುಗಿಯುವುದರಿಂದ ಪೋಷಕರಿಗೂ ಆರ್ಥಿಕ ಹಾಗೂ ಸಮಯದ ಉಳಿತಾಯವಾಗಲಿದೆ.
“ಪಿಯುಸಿ ಅರ್ಜಿಯನ್ನೇ ಸಿಇಟಿಗೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ಕಾಲೇಜಿನಲ್ಲೇ ಪ್ರಾಂಶುಪಾಲರ ಸಮ್ಮುಖದಲ್ಲಿ ನಿಖರ ದಾಖಲೆ ನೀಡುವುದರಿಂದ ತಪ್ಪುಗಳು ವರದಿಯಾಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳ ಸಮಯ ವ್ಯಯವಾಗುವುದು ತಪ್ಪಲಿದ್ದು, ಮಾನಸಿಕ ಒತ್ತಡವೂ ನಿವಾರಣೆಯಾಗಲಿದೆ.”
ಎಚ್. ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕರು, ಕೆಇಎ.








