ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ರೂರ್ಕಿಯು ಜಂಟಿ ಪ್ರವೇಶ ಪರೀಕ್ಷೆ (JEE) ಅಡ್ವಾನ್ಸ್ಡ್ 2026 ರ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಫಲಿತಾಂಶದ ಜೊತೆಗೆ ಪೇಪರ್ 1 ಮತ್ತು ಪೇಪರ್ 2 ರ ಅಂತಿಮ ಉತ್ತರ ಕೀಲಿಗಳನ್ನು (Final Answer Key) ಸಹ ಬಿಡುಗಡೆ ಮಾಡಲಾಗಿದೆ.
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್‌ನ ಅಧಿಕೃತ ವೆಬ್‌ಸೈಟ್ ಆದ jeeadv.ac.in ಮೂಲಕ ತಮ್ಮ ರೋಲ್ ನಂಬರ್, ಜನ್ಮ ದಿನಾಂಕ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ ಆಗುವ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಫಲಿತಾಂಶ ಪರಿಶೀಲಿಸುವುದು ಹೇಗೆ?
ಅಧಿಕೃತ ವೆಬ್‌ಸೈಟ್ jeeadv.ac.in ಗೆ ಭೇಟಿ ನೀಡಿ.
ಮುಖಪುಟದಲ್ಲಿರುವ ‘JEE ಅಡ್ವಾನ್ಸ್ಡ್ 2026 ರಿಸಲ್ಟ್’ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಅಗತ್ಯವಿರುವ ವಿವರಗಳನ್ನು ನಮೂದಿಸಿ ಲಾಗಿನ್ ಆಗಿ.
ಸ್ಕೋರ್‌ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ.
ಅದನ್ನು ಡೌನ್‌ಲೋಡ್ ಮಾಡಿ, ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟೌಟ್ ತೆಗೆದುಕೊಳ್ಳಿ.
ಟಾಪರ್‌ಗಳ ಪಟ್ಟಿ:
ಈ ವರ್ಷದ ಪರೀಕ್ಷೆಯಲ್ಲಿ ಶುಭಂ ಕುಮಾರ್ ಅವರು 360 ಅಂಕಗಳಿಗೆ 330 ಅಂಕಗಳನ್ನು ಪಡೆಯುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರಾಂಕ್ (AIR 1) ಪಡೆದು ಸಾಧನೆ ಮಾಡಿದ್ದಾರೆ. ಐಐಟಿ ದೆಹಲಿ ವಲಯದ ಕಬೀರ್ ಛಿಲ್ಲರ್ 329 ಅಂಕಗಳೊಂದಿಗೆ ಎರಡನೇ ರಾಂಕ್ ಹಾಗೂ ಜತಿನ್ ಚಾಹರ್ 319 ಅಂಕಗಳೊಂದಿಗೆ ಮೂರನೇ ರಾಂಕ್ ಗಳಿಸಿದ್ದಾರೆ.
ಪರೀಕ್ಷೆಯ ಪ್ರಮುಖ ಅಂಕಿ-ಅಂಶಗಳು:
ಮೇ 17, 2026 ರಂದು ನಡೆದ ಈ ಪ್ರತಿಷ್ಠಿತ ಪರೀಕ್ಷೆಗೆ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅಗ್ರ 2.5 ಲಕ್ಷ ಅಭ್ಯರ್ಥಿಗಳಿಗೆ ಮಾತ್ರ ಅರ್ಹತೆ ನೀಡಲಾಗಿತ್ತು.
ಒಟ್ಟು ನೋಂದಾಯಿತ ಅಭ್ಯರ್ಥಿಗಳು: 1,87,389
ಪರೀಕ್ಷೆಗೆ ಹಾಜರಾದವರು: 1,79,694
ಅರ್ಹತೆ ಪಡೆದ ಒಟ್ಟು ಅಭ್ಯರ್ಥಿಗಳು: 56,880
ಅರ್ಹತೆ ಪಡೆದ ವಿದ್ಯಾರ್ಥಿನಿಯರು: 10,107
ದೇಶದ ಪ್ರತಿಷ್ಠಿತ ಐಐಟಿ (IIT) ಸಂಸ್ಥೆಗಳಲ್ಲಿ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಈ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸದ್ಯ ಫಲಿತಾಂಶ ಹೊರಬಿದ್ದಿರುವುದರಿಂದ ಮುಂದಿನ ಪ್ರವೇಶ ಪ್ರಕ್ರಿಯೆಗಳು ಆರಂಭವಾಗಲಿವೆ.








