ಮೈಸೂರು: ‘ಕಾಂತಾರ’ ಸಿನಿಮಾದ ಪಂಜುರ್ಲಿ ಹಾಗೂ ಚಾವುಂಡಿ ದೈವದ ಪಾತ್ರವನ್ನು ಹೆಣ್ಣು ದೆವ್ವ ಎಂದು ಕರೆದು, ಅಪಹಾಸ್ಯ ಮಾಡಿದ್ದ ಆರೋಪ ಎದುರಿಸುತ್ತಿದ್ದ ಬಾಲಿವುಡ್ ನಟ ರಣವೀರ್ ಸಿಂಗ್, ಇದೀಗ ಮೈಸೂರಿನ ಸಾಂಸ್ಕೃತಿಕ ನಗರಿಗೆ ಭೇಟಿ ನೀಡಿದ್ದಾರೆ. ಯಾರಿಗೂ ಮುನ್ಸೂಚನೆ ನೀಡದಂತೆ ರಹಸ್ಯವಾಗಿ ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿದ ಅವರು, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮಿಂದಾದ ತಪ್ಪಿಗೆ ತಾಯಿಯ ಸನ್ನಿಧಿಯಲ್ಲಿ ತಲೆಬಾಗಿ ಕ್ಷಮೆಯಾಚಿಸಿದ್ದಾರೆ.
ರಣವೀರ್ ಸಿಂಗ್ ಅವರು ದೇವಸ್ಥಾನದ ಗರ್ಭಗುಡಿಯ ಮುಂದೆ ಅತ್ಯಂತ ಭಕ್ತಿಭಾವದಿಂದ ಕುಳಿತು, ಕೈಮುಗಿದು ತಲೆಬಾಗಿ ಕ್ಷಮೆ ಕೇಳುತ್ತಿರುವ ಫೋಟೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಈ ಹಿಂದೆ ಈ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ, ರಣವೀರ್ ಸಿಂಗ್ ಅವರು ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಅಷ್ಟೇ ಅಲ್ಲದೆ, ಶೀಘ್ರದಲ್ಲೇ ಕರ್ನಾಟಕದ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಖುದ್ದಾಗಿ ಭೇಟಿ ನೀಡಿ ಪ್ರಾಯಶ್ಚಿತ್ತ ಪೂಜೆ ಸಲ್ಲಿಸುವುದಾಗಿ ನ್ಯಾಯಾಲಯ ಹಾಗೂ ಸಾರ್ವಜನಿಕರಿಗೆ ಭರವಸೆ ನೀಡಿದ್ದರು. ಅದರಂತೆ ಈಗ ಅವರು ಮೈಸೂರಿಗೆ ಬಂದು ದೈವದ ಅಪಮಾನದ ಕಳಂಕ ಕಳೆದುಕೊಳ್ಳಲು ಯತ್ನಿಸಿದ್ದಾರೆ.
ಏನಿದು ಪ್ರಕರಣ? ವಿವಾದದ ಹಿನ್ನೆಲೆ:
ಕೆಲವು ತಿಂಗಳುಗಳ ಹಿಂದೆ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಕಾರ್ಯಕ್ರಮದಲ್ಲಿ ಈ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಕಾರ್ಯಕ್ರಮದ ವೇದಿಕೆಯ ಮೇಲೆ ‘ಕಾಂತಾರ’ ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಸಮ್ಮುಖದಲ್ಲೇ ಮಾತನಾಡಿದ್ದ ರಣವೀರ್ ಸಿಂಗ್, ಸಿನಿಮಾ ಮತ್ತು ರಿಷಬ್ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಆದರೆ, ಇದೇ ವೇಳೆ ಅವರು ಬಳಸಿದ ಕೆಲವು ಪದಗಳು ಮತ್ತು ದೈವವನ್ನು ಅನುಕರಿಸಿದ ರೀತಿ ಕರಾವಳಿ ಭಾಗದ ಜನರ ಹಾಗೂ ದೈವಾರಾಧಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ವೇದಿಕೆಯಲ್ಲಿ ರಣವೀರ್ ಸಿಂಗ್ ಮಾತನಾಡುತ್ತಾ, “ನಾನು ಥಿಯೇಟರ್‌ನಲ್ಲಿ ‘ಕಾಂತಾರ’ ಸಿನಿಮಾ ನೋಡಿದೆ. ರಿಷಬ್ ಅವರೇ, ನಿಮ್ಮ ನಟನೆ ನಿಜಕ್ಕೂ ಅದ್ಭುತವಾಗಿತ್ತು. ಅದರಲ್ಲೂ ಆ ‘ಹೆಣ್ಣು ದೆವ್ವ’ (Female Ghost) ನಿಮ್ಮ ಮೈಮೇಲೆ ಬರುವ ದೃಶ್ಯವಂತೂ ಅತ್ಯಂತ ರೋಮಾಂಚನಕಾರಿಯಾಗಿತ್ತು. ಆ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ನಿಮ್ಮ ನಟನೆ ಮತ್ತು ನಿಮ್ಮ ನೋಟ ತುಂಬಾ ಮಜವಾಗಿತ್ತು (Funny)” ಎಂದು ಹೇಳುತ್ತಾ, ಕಾಂತಾರ ಸಿನಿಮಾದ ದೈವದ ನರ್ತನ ಹಾಗೂ ಕಿರುಚಾಟವನ್ನು ವೇದಿಕೆಯ ಮೇಲೆ ವಿಲಕ್ಷಣವಾಗಿ ಅನುಕರಣೆ ಮಾಡಿ ತೋರಿಸಿದ್ದರು.
ದೈವಾರಾಧಕರ ಆಕ್ರೋಶ ಮತ್ತು ಕಾನೂನು ಹೋರಾಟ: ತುಳುನಾಡಿನ ಪವಿತ್ರ ಸಂಸ್ಕೃತಿ ಮತ್ತು ನಂಬಿಕೆಯ ಸಂಕೇತವಾಗಿರುವ, ಕರಾವಳಿಯ ಜನ ದೇವರೆಂದೇ ಪೂಜಿಸುವ ‘ಚಾವುಂಡಿ ಮತ್ತು ಪಂಜುರ್ಲಿ’ ದೈವವನ್ನು ರಣವೀರ್ ಸಿಂಗ್ ‘ಹೆಣ್ಣು ದೆವ್ವ’ ಎಂದು ಕರೆದಿದ್ದು ಹಾಗೂ ಅದನ್ನು ವೇದಿಕೆಯ ಮೇಲೆ ಹಾಸ್ಯದ ವಸ್ತುವನ್ನಾಗಿ ಮಾಡಿದ್ದನ್ನು ದೈವಾರಾಧಕರು ಕಠಿಣವಾಗಿ ಖಂಡಿಸಿದ್ದರು. ಇದು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ರಣವೀರ್ ಸಿಂಗ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿತ್ತು. ತದನಂತರ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಸ್ತುತ ರಣವೀರ್ ಸಿಂಗ್ ಮೈಸೂರಿಗೆ ಬಂದು ತಾಯಿಯ ಸನ್ನಿಧಿಯಲ್ಲಿ ಕ್ಷಮೆ ಕೇಳುವ ಮೂಲಕ ಈ ವಿವಾದಕ್ಕೆ ಪೂರ್ಣವಿರಾಮ ಇಡಲು ಮುಂದಾಗಿದ್ದಾರೆ.








