ನವದೆಹಲಿ: ಕರ್ನಾಟಕ ಕಾಂಗ್ರೆಸ್ ರಾಜಕಾರಣದ ಅತ್ಯಂತ ಕುತೂಹಲಕಾರಿ ‘ಪಟ್ಟದ ಪಗಡೆಯಾಟ’ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ರಾಜ್ಯ ರಾಜಧಾನಿಯಿಂದ ದೇಶದ ರಾಜಧಾನಿ ದೆಹಲಿಗೆ ಶಿಫ್ಟ್ ಆಗಿರುವ ಈ ಹೈವೋಲ್ಟೇಜ್ ರಾಜಕೀಯದ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಮುಖಾಮುಖಿಯಾಗಿದ್ದಾರೆ. ಹೈಕಮಾಂಡ್ ನಾಯಕರೊಂದಿಗಿನ ಪ್ರಮುಖ ‘ಒನ್ ಟು ಒನ್’ ಚರ್ಚೆಗೂ ಮುನ್ನ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಪ್ರತ್ಯೇಕವಾಗಿ ದೆಹಲಿ ತಲುಪಿದ್ದ ನಾಯಕರು: ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರು ಹಾಗೂ ಶಾಸಕರ ದಂಡಿನೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಮತ್ತೊಂದೆಡೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡ ತಮ್ಮ ಆಪ್ತ ಶಾಸಕರು ಮತ್ತು ಸಚಿವರನ್ನು ಒಳಗೊಂಡ ಪ್ರತ್ಯೇಕ ತಂಡದೊಂದಿಗೆ ದೆಹಲಿಗೆ ತಲುಪಿದ್ದರು. ಆದರೆ, ದೆಹಲಿ ತಲುಪಿದಾಗಿನಿಂದ ಇಂದು ಬೆಳಗ್ಗಿನವರೆಗೂ ಇಬ್ಬರು ನಾಯಕರು ಎಲ್ಲೂ ಪರಸ್ಪರ ಭೇಟಿಯಾಗಿರಲಿಲ್ಲ. ಇದು ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಗ್ರಾಸ ಮಾಡಿಕೊಟ್ಟಿತ್ತು.
ಕಾಂಗ್ರೆಸ್ ಕಚೇರಿಯಲ್ಲಿ ಮುಖಾಮುಖಿ: ಎಲ್ಲಾ ಕುತೂಹಲಗಳಿಗೂ ತೆರೆ ಎಳೆಯುವಂತೆ, ಇಂದು ದೆಹಲಿಯ ಎಐಸಿಸಿ (AICC) ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಮುಖಾಮುಖಿಯಾಗಿದ್ದಾರೆ. ಹೈಕಮಾಂಡ್ ನಾಯಕರ ಸಭೆಗೂ ಮುನ್ನ ಇಬ್ಬರೂ ನಾಯಕರು ಪರಸ್ಪರ ಭೇಟಿಯಾಗಿ ಅತ್ಯಂತ ಗಂಭೀರವಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ರಾಜ್ಯ ರಾಜಕಾರಣದ ಮುಂದಿನ ಬೆಳವಣಿಗೆಗಳು ಹಾಗೂ ಹೈಕಮಾಂಡ್ ಮುಂದೆ ಮಂಡಿಸಬೇಕಾದ ಪ್ರಮುಖ ವಿಷಯಗಳ ಕುರಿತು ಈ ವೇಳೆ ಚರ್ಚ ನಡೆದಿದೆ ಎನ್ನಲಾಗಿದೆ.
ಫೋಟೋ ವೈರಲ್ – ಕುತೂಹಲ ಮೂಡಿಸಿದ ಮಾತುಕತೆ: ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಮುಖಾಮುಖಿಯಾಗಿ ಮಾತನಾಡುತ್ತಿರುವ ಸುಂದರ ಹಾಗೂ ಗಂಭೀರವಾದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಇಬ್ಬರು ಧುರಂಧರ ನಾಯಕರ ಈ ಮುಖಾಮುಖಿ ಭೇಟಿಯ ಚಿತ್ರಗಳು ಕೇವಲ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಾತ್ರವಲ್ಲದೆ, ಇಡೀ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಮುಂದಿನ ಕ್ಲೈಮ್ಯಾಕ್ಸ್ ಏನಿರಬಹುದು ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಹೈಕಮಾಂಡ್ ಕೋರ್ಟ್ಗೆ ತಲುಪಿದ ಚೆಂಡು: ಸದ್ಯ ಇಬ್ಬರೂ ನಾಯಕರು ಪರಸ್ಪರ ಚರ್ಚಿಸಿದ ಬೆನ್ನಲ್ಲೇ, ಹೈಕಮಾಂಡ್ ಪ್ರಮುಖ ನಾಯಕರೊಂದಿಗೆ ಸಭೆ ಆರಂಭವಾಗಿದೆ. ಒನ್ ಟು ಒನ್ ಸಭೆಯಲ್ಲಿ ಹೈಕಮಾಂಡ್ ನಾಯಕರು ಇಬ್ಬರ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಆಲಿಸಲಿದ್ದಾರೆ. ರಾಜ್ಯ ಸರ್ಕಾರದ ಆಡಳಿತ, ಸಚಿವ ಸಂಪುಟ ಪುನಾರಚನೆ ಅಥವಾ ಅಧಿಕಾರ ಹಂಚಿಕೆಯ ಸೂತ್ರದಂತಹ ಪ್ರಮುಖ ವಿಷಯಗಳ ಸುತ್ತ ಈ ಇಡೀ ಗೇಮ್ ಪ್ಲಾನ್ ನಡೆಯುತ್ತಿದ್ದು, ಹೈಕಮಾಂಡ್ ತೆಗೆದುಕೊಳ್ಳುವ ಅಂತಿಮ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.








