ಬೆಂಗಳೂರು: ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳ ಸೋಗಿನಲ್ಲಿ ‘ಡಿಜಿಟಲ್ ಅರೆಸ್ಟ್’ ಮಾಡಿ 78 ವರ್ಷದ ವೃದ್ಧೆ ಮತ್ತು ಅವರ ಪುತ್ರಿಗೆ ಸೈಬರ್ ವಂಚಕರು 2.1 ಕೋಟಿ ರೂಪಾಯಿ ವಂಚಿಸಿದ್ದಾರೆ. ಈ ಕುರಿತು ವಂಚನೆಗೊಳಗಾದ ಜಯನಗರದ ನಿವಾಸಿ ಪ್ರಸನ್ನ ಪಾರ್ವತಿ ಎಂಬವರು ನೀಡಿದ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಎನ್‌ಐಎ ಅಧಿಕಾರಿಗಳೆಂದು ಕರೆ ಮಾಡಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏ.13ರಂದು ವಾಟ್ಸ್‌ಆ್ಯಪ್ ಮೂಲಕ ವಂಚಕರು, ಪ್ರಸನ್ನ ಪಾರ್ವತಿ ಅವರಿಗೆ ಕರೆ ಮಾಡಿ, ತಾವೂ ಎನ್ಐಎ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು. ಬಳಿಕ ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯನೊಬ್ಬ ತಮ್ಮ ಹೆಸರಿನಲ್ಲಿ ಡೆಬಿಟ್ ಕಾರ್ಡ್ ಬಳಸುತ್ತಿದ್ದಾನೆ, ನಿಮ್ಮ ಪುತ್ರಿಯೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ ಎಂದು ಹೆದರಿಸಿದ್ದಾರೆ. ಕರೆ ಮಾಡಿರುವುದನ್ನು ಯಾರಿಗೂ ತಿಳಿಸಬಾರದು ಎಂದಿರುವ ವಂಚಕರು, ವೃದ್ಧೆ ಹಾಗೂ ಅವರ ಮಕ್ಕಳಿಂದ ಎಲ್ಲ ದಾಖಲೆಗಳನ್ನೂ ಪಡೆದುಕೊಂಡಿದ್ದಾರೆ.
ಪೊಲೀಸ್ ಠಾಣೆಯಂತೆ ಕಾಣುವ ಕೊಠಡಿಯಿಂದ ಆರೋಪಿಗಳು ವಿಡಿಯೋ ಕರೆ ಮಾಡಿದ್ದಾರೆ. ಈ ವಿಡಿಯೋ ಕರೆಯನ್ನು ವೀಕ್ಷಿಸಿದ ವೃದ್ಧೆ, ಎನ್‌ಐಎ ಅಧಿಕಾರಿಗಳೇ ಇರಬಹುದೆಂದು ಭಾವಿಸಿ, ತಮ್ಮೆಲ್ಲಾ ಮಾಹಿತಿ ನೀಡಿದ್ದಾರೆ.ನಂತರ ವಿಡಿಯೋ ಕರೆ ಮಾಡಿದ್ದ ಆರೋಪಿ ತನ್ನನ್ನು ಪ್ರದೀಪ್ ಜಸ್ವಾಲ್ ಎಂದು ಪರಿಚಯಿಸಿಕೊಂಡಿದ್ದ. ಹೇಳಿಕೆ ದಾಖಲಿಸಿಕೊಳ್ಳುವಂತೆ ನಾಟಕವಾಡಿದ್ದ.
ಸರಿಯಾದ ಮಾಹಿತಿ ನೀಡದಿದ್ದರೆ ಬಂಧಿಸಲಾಗುವುದು ಎಂದು ಬೆದರಿಸಿದ್ದಾನೆ. ನಂತರ ಬ್ಯಾಂಕ್ ವ್ಯವಹಾರವನ್ನು ಪರಿಶೀಲಿಸಬೇಕು, ತಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನೂ ವರ್ಗಾವಣೆ ಮಾಡುವಂತೆ ಸೂಚಿಸಿ ಕೆಲವು ಖಾತೆಗಳ ವಿವರವನ್ನು ನೀಡಿದ್ದ. ಆರ್‌ಬಿಐ ಮಾರ್ಗಸೂಚಿಯಂತೆ ಪರಿಶೀಲಿಸಿ ಬಳಿಕ ಹಣ ಮರಳಿಸಲಾಗುವುದು ಎಂದು ನಂಬಿಸಿದ್ದ. ವಂಚಕನ ಮಾತು ನಂಬಿದ ವೃದ್ಧೆ, ಹಂತ ಹಂತವಾಗಿ ಹಣ ವರ್ಗಾಯಿಸಿದ್ದರು.








