ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ವಿರುದ್ಧ ಗಂಭೀರ ಸ್ವರೂಪದ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಕೇಳಿಬಂದಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯನ್ನೇ ಸೋಲಿಸಲು ಆಂತರಿಕವಾಗಿ ಕೆಲಸ ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿವೆ.
ಈ ಆರೋಪಗಳಿಗೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ಕ್ಲಿಪ್ ಒಂದು ಭಾರಿ ವೈರಲ್ ಆಗುತ್ತಿದೆ. ‘ಕಾಕ್ರೋಚ್ ಪಾರ್ಟಿ’ ಹೆಸರಿನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಆಡಿಯೋ ಸಂಭಾಷಣೆ ಬಿಡುಗಡೆಯಾಗಿದ್ದು, ಇದರಲ್ಲಿ ಕೇಳಿಬರುವ ಧ್ವನಿ ಸಚಿವ ಜಮೀರ್ ಅಹಮದ್ ಅವರದ್ದೇ ಎನ್ನಲಾಗಿದೆ. ದಾವಣಗೆರೆಯ ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಕೆಎಂಡಿಸಿ ನಿರ್ದೇಶಕ ಮೊಹಮ್ಮದ್ ಸಿರಾಜ್ ಎಂಬುವವರ ಜೊತೆ ಜಮೀರ್ ನಡೆಸಿರುವ ಮಾತುಕತೆ ಇದಾಗಿದೆ ಎಂದು ಬಿಂಬಿಸಲಾಗಿದೆ.
ವೈರಲ್ ಆಗಿರುವ ಆಡಿಯೋದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಬಿಟ್ಟು, ಪಕ್ಷೇತರ ಹಾಗೂ ಎಸ್‌ಡಿಪಿಐ (SDPI) ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಜಮೀರ್ ಅವರು ಸೂಚನೆ ನೀಡುತ್ತಿರುವುದು ಸ್ಪಷ್ಟವಾಗಿ ಕೇಳಿಬರುತ್ತಿದೆ. “ಕ್ಷೇತ್ರದಲ್ಲಿ ಮುಸ್ಲಿಂ ಮತದಾನ ಕಡಿಮೆ ಇದೆ. ಅವರು ಹೊರಗೆ ಬಂದರೆ ನಂಬಲು ಸಾಧ್ಯವಿಲ್ಲ, ಕಾಂಗ್ರೆಸ್‌ಗೇ ವೋಟ್ ಹಾಕುತ್ತಾರೆ. ಹಾಗಾಗಿ ಯಾರನ್ನೂ ಒತ್ತಾಯ ಮಾಡಿ ಮನೆಯಿಂದ ಮತದಾನಕ್ಕೆ ಕರೆತರಬೇಡಿ. ಅವರು ಪಕ್ಷೇತರರಿಗೆ ಅಥವಾ ಎಸ್‌ಡಿಪಿಐಗೆ ವೋಟ್ ಹಾಕಲಿ” ಎಂದು ಜಮೀರ್ ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಇನ್ನು ಆಡಿಯೋ ಸಂಭಾಷಣೆಯ ಆರಂಭದಲ್ಲಿ ಜಮೀರ್ ಅವರು ಸ್ಥಳೀಯ ಮುಖಂಡ ಸಿರಾಜ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “ಚುನಾವಣೆಯ ದಿನ ಮಧ್ಯಾಹ್ನ 1 ಗಂಟೆಯವರೆಗೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡರೆ ನಾನ್ ಏನ್ ಮಾಡ್ಲಿ?” ಎಂದು ಜಮೀರ್ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸುವ ಸಿರಾಜ್, “ಇಲ್ಲ ಸರ್, ನಾನು ಬೆಳಗ್ಗೆ 7 ಗಂಟೆಯಿಂದ ವಾರ್ಡ್‌ನಲ್ಲೇ ಕೆಲಸ ಮಾಡುತ್ತಿದ್ದೇನೆ. ನನ್ನ ಮೊಬೈಲ್ ಆಫ್ ಇದ್ದ ಕಾರಣ ಮಗನ ಮೊಬೈಲ್ ಬಳಸುತ್ತಿದ್ದೇನೆ. ಹಫೀಜ್ ಸಾಬ್ ಕೂಡ ನನ್ನ ಜೊತೆಯಲ್ಲೇ ಇದ್ದಾರೆ” ಎಂದು ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ.
ಆದರೆ ಸಿರಾಜ್ ಅವರ ಸಮರ್ಥನೆಯಿಂದ ತೃಪ್ತರಾಗದ ಜಮೀರ್, “ನೀನು ಬೆಳಗ್ಗಿನಿಂದಲೇ ಅಲರ್ಟ್ ಆಗಿ ಕೆಲಸ ಮಾಡಬೇಕಿತ್ತಲ್ಲೋ, ಏನಯ್ಯಾ ಇದು?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಈ ಚುನಾವಣೆ ತಮಗೆ ಎಷ್ಟು ಮುಖ್ಯ ಎಂಬುದನ್ನು ಒತ್ತಿಹೇಳಿರುವ ಅವರು, “ಇದು ನನ್ನ ಮರ್ಯಾದೆಯ ಪ್ರಶ್ನೆ. ನನಗೆ ರಾತ್ರಿಯೂ ಸರಿಯಾಗಿ ನಿದ್ದೆ ಬಂದಿಲ್ಲ” ಎಂದು ಬೇಸರ ಹಾಗೂ ಆತಂಕವನ್ನು ಹೊರಹಾಕಿದ್ದಾರೆ.
ಪ್ರಸ್ತುತ ಈ ಆಡಿಯೋ ಕ್ಲಿಪ್ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ಸರ್ಕಾರದ ಸಚಿವರೊಬ್ಬರೇ ಸ್ವಪಕ್ಷದ ಅಭ್ಯರ್ಥಿ ವಿರುದ್ಧ ಮತದಾನ ಕಡಿಮೆ ಮಾಡುವಂತೆ ಮತ್ತು ಇತರ ಪಕ್ಷಗಳಿಗೆ ಮತ ಹಾಕಿಸುವಂತೆ ಆಂತರಿಕವಾಗಿ ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿರುವುದು ಕೈ ಪಾಳಯಕ್ಕೆ ತೀವ್ರ ಮುಜುಗರ ತಂದಿಟ್ಟಿದೆ. ಈ ಕುರಿತು ಕೆಪಿಸಿಸಿ ಹೈಕಮಾಂಡ್ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ.








