ಕಲಬುರ್ಗಿ: ರಾಜ್ಯದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಕಣ್ಣೆದುರೇ ಹೆತ್ತ ತಂದೆ ನದಿಯ ನೀರಿನಲ್ಲಿ ಮುಳುಗುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಮಗ ನಿಂತಿದ್ದ ದಾರುಣ ಘಟನೆಯೊಂದು ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಮಗನ ಕಣ್ಣು ಮುಂದೆಯೇ ತಂದೆ ನೀರು ಪಾಲಾಗಿ ಜೀವಬಿಟ್ಟಿರುವ ಘಟನೆ ಇಡೀ ಜಿಲ್ಲೆಯನ್ನು ಕಣ್ಣೀರಿಡುವಂತೆ ಮಾಡಿದೆ.
ಭೀಮಾ ನದಿಯಲ್ಲಿ ನಡೆದ ದುರಂತ: ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ಬಳಿ ಹರಿಯುವ ಭೀಮಾ ನದಿಯಲ್ಲಿ ಈ ಒಂದು ಘೋರ ದುರಂತ ಸಂಭವಿಸಿದೆ. ನದಿಯ ಮತ್ತೊಂದು ದಡದಲ್ಲಿದ್ದ ತಮ್ಮ ಎಮ್ಮೆಯನ್ನು ವಾಪಸ್ ಕರೆತರುವುದಕ್ಕಾಗಿ ತಂದೆ ನದಿಗೆ ಇಳಿದಿದ್ದರು. ಆದರೆ, ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮಗನ ಮೊಬೈಲ್‌ನಲ್ಲಿ ಸೆರೆಯಾಯ್ತು ತಂದೆಯ ಕೊನೆಯ ಕ್ಷಣ: ಮೃತಪಟ್ಟ ದುರ್ದೈವಿ ತಂದೆಯನ್ನು ವಿಜಯ್ ರಾಜು ಎಂದು ಗುರುತಿಸಲಾಗಿದೆ. ತಂದೆ ನದಿ ದಾಟುತ್ತಿದ್ದ ಸಂದರ್ಭದಲ್ಲಿ ಮಗ ದಡದ ಮೇಲೆ ನಿಂತು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದ ಎನ್ನಲಾಗಿದೆ. ದುರದೃಷ್ಟವಶಾತ್, ತಂದೆಯ ಸಾವಿನ ಕೊನೆಯ ಕ್ಷಣದ ಭೀಕರ ದೃಶ್ಯಗಳು ಮಗನ ಮೊಬೈಲ್ ಕ್ಯಾಮೆರಾದಲ್ಲೇ ಸೆರೆಯಾಗಿದ್ದು, ನೋಡುವವರ ಎದೆ ನಡುಗಿಸುವಂತಿದೆ.
ಈಜು ಬಾರದೆ ಜಲಸಮಾಧಿ: ನದಿಯ ಆಚೆ ದಡಕ್ಕೆ ತೆರಳಲು ಮುಂದಾದ ವಿಜಯ್ ರಾಜು ಅವರಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ನೀರಿನ ಆಳ ಹಾಗೂ ಹರಿವಿನ ವೇಗವನ್ನು ಅರಿಯದೆ ಅವರು ನದಿಗೆ ಇಳಿದಿದ್ದಾರೆ. ನದಿಯ ಮಧ್ಯಭಾಗಕ್ಕೆ ತಲುಪುತ್ತಿದ್ದಂತೆ ನೀರಿನ ಸೆಳೆತಕ್ಕೆ ಸಿಲುಕಿ ನಿಯಂತ್ರಣ ತಪ್ಪಿ ಮುಳುಗಲು ಪ್ರಾರಂಭಿಸಿದ್ದಾರೆ.
ನೋಡುನೋಡುತ್ತಿದ್ದಂತೆಯೇ ಮುಳುಗಿದ ಜೀವ: “ಕಾಪಾಡಿ, ಕಾಪಾಡಿ” ಎಂದು ತಂದೆ ನೀರಿನಲ್ಲಿ ಕೈಕಾಲು ಬಡಿಯುತ್ತಿದ್ದರೆ, ಇತ್ತ ದಡದಲ್ಲಿದ್ದ ಮಗನಿಗೆ ಏನು ಮಾಡಬೇಕೆಂದೇ ತೋಚದಂತಾಗಿದೆ. ನೋಡು ನೋಡುತ್ತಿದ್ದಂತೆಯೇ ತಂದೆ ವಿಜಯ್ ರಾಜು ಮಗನ ಕಣ್ಣೆದುರಲ್ಲೇ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದಾರೆ. ತಂದೆಯನ್ನು ರಕ್ಷಿಸಲು ಸಾಧ್ಯವಾಗದ ಮಗನ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಹಾಗೂ ರಕ್ಷಣಾ ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ.








