ದಾವಣಗೆರೆ : ಕಳೆದ ಎರಡು ದಿನಗಳ ಹಿಂದೆ ಚನ್ನಗಿರಿ ಠಾಣೆಯಲ್ಲಿ ಆದಿಲ್ ಎನ್ನುವ ವ್ಯಕ್ತಿಯ ಲಾಕಪ್ ಡೆತ್, ಹಾಗೂ ಠಾಣೆ ಬಳಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆ ಸಿಐಡಿಗೆ ಹಸ್ತಾಂತರಿಸಲಾಗಿದೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದ್ದಂತೆ 25 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಎಸ್ಪಿ ಉಮಾಪ್ರಶಾಂತ್, ಪ್ರಕರಣದ ತನಿಖೆ ಸಿಐಡಿಗೆ ವಹಿಸಲಾಗಿದೆ. ಶೀಘ್ರವಾಗಿ ಸಿಐಡಿ ಅಧಿಕಾರಿಗಳು ಪ್ರಕರಣವನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಳ್ಳಲಿದೆ ಎಂದರು.
ಕಾನೂನು ಪ್ರಕಾರ ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಮೂರು ದಿನದಲ್ಲಿ ಪೋಸ್ಟ್ ಮಾರ್ಟಂ ವರದಿ ಬರಲಿದ್ದು ಸತ್ಯ ಹೊರಬೀಳಲಿದೆ. ಪ್ರಕರಣದ ಬಗ್ಗೆ ಮಾಹಿತಿ ಚನ್ನಗಿರಿ ಡಿವೈಎಸ್‌ಪಿ ಪ್ರಶಾಂತ ಮುನ್ನೊಳ್ಳಿ ಮಾಹಿತಿ ಪಡೆದುಕೊಂಡಿದ್ದಾರೆ. ಕಲ್ಲು ತೂರಾಟ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ 25 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದೇವೆ. ಬಂಧಿತರು ಚನ್ನಗಿರಿ, ಹೊನ್ನೆಬಾಗಿ, ನಲ್ಲೂರು ಗ್ರಾಮಗಳ ನಿವಾಸಿಗಳು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 353, 307ರಡಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಐದು ತಂಡಗಳನ್ನು ರಚನೆ ಮಾಡಿದ್ದ ಪೊಲೀಸ್ ಸಿಸಿ ಸಿಸಿ ಕ್ಯಾಮರಾ, ಮೊಬೈಲ್ ಚಿತ್ರೀಕರಣದ ವಿಡಿಯೋ, ಸಾರ್ವಜನಿಕರು ಚಿತ್ರಿಕರಿಸಿದ ವಿಡಿಯೋಗಳನ್ನು ಪರಿಶೀಲಿಸುವ ಮೂಲಕ ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದರು. ಆ ಮೂಲಕ 40 ಕ್ಕೂ ಹೆಚ್ಚು ಕಿಡಿಗೇಡಿಗಳನ್ನು ಪತ್ತೆ ಮಾಡಿದ್ದರು.